health-Kannada

Health Tips: ಸೇಬಿನ ಅದ್ಭುತ ಪ್ರಯೋಜನಗಳು…

ಸೇಬು ಹಣ್ಣಿನ ಅದ್ಭುತ ಪ್ರಯೋಜನಗಳು…

“ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುವುದು” ಈ ವಾಕ್ಯವನ್ನು ಚಿಕ್ಕಂದಿನಿಂದಲೂ ಕೇಳುತ್ತಲೇ ಬಂದಿದ್ದೇವೆ. ಬೇರೆಲ್ಲಾ ಹಣ್ಣುಗಳಿಗಿಂತ ಸೇಬಿನಲ್ಲಿರುವ ಪೋಷಕಾಂಶಗಳ ಆಗರವೇ ಇದಕ್ಕೆ ಕಾರಣ.

ಪ್ರತಿದಿನ ಸೇಬು ಹಣ್ಣೊಂದನ್ನು ತಿನ್ನುವ ಮೂಲಕ ದೇಹಕ್ಕೆ ಅಗತ್ಯವಾದ ಪ್ರಮಾಣದ ಪ್ರೋಟೀನುಗಳು, ವಿಟಮಿನ್ ಗಳು, ಆಂಟಿ ಆಕ್ಸಿಡೆಂಟುಗಳು ಹಾಗೂ ಮುಖ್ಯವಾಗಿ ವಿಟಮಿನ್ ಸಿ ಲಭ್ಯವಿರುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಂಡು ಬರುವ ಕಾರಣ ಸೇಬಿಗೆ ವೈದ್ಯರನ್ನು ದೂರ ಅಟ್ಟಿದ ಅತಿಶಯೋಕ್ತಿ ಲಭ್ಯವಾಗಿದೆ.

ಉತ್ತರ ಭಾರತದ, ಅದರಲ್ಲೂ ಹಿಮಾಚಲ ಪ್ರದೇಶದಲ್ಲಿ ಹೆಚ್ಚು ಬೆಳೆಯಲಾಗುವ ಸೇಬುಹಣ್ಣು ಹಿಂದೆ ದುಬಾರಿಯಾಗಿದ್ದ ಕಾರಣ ಶ್ರೀಮಂತರೇ ಹೆಚ್ಚಾಗಿ ಖರೀದಿಸುತ್ತಿದ್ದರು.

ಆದರೆ ಇಂದು ಸೇಬುಹಣ್ಣು ವರ್ಷದ ಬಹುತೇಕ ದಿನಗಳಲ್ಲಿ ಜನಸಾಮಾನ್ಯರಿಗೆ ಎಟಕುವಂತ ಬೆಲೆಯಲ್ಲಿ ದೊರಕುತ್ತಿದೆ.ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗುವ ನಾರು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶಗಳಿರುವ ಕಾರಣ ಎಲ್ಲಾ ವರ್ಗದ ಜನರಿಗೆ ಆರೋಗ್ಯದ ಭಾಗ್ಯ ಕರುಣಿಸುವ ಹಣ್ಣಾಗಿದೆ.

ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ:
ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನರಗಳ ಒಳಭಾಗದಲ್ಲಿ ಅಥವಾ ತಿರುವಿರುವೆಡೆಯಲ್ಲಿನ ಮೂಲೆಗಳಲ್ಲಿ ಸಂಗ್ರಹವಾಗುತ್ತಾ ಹೋಗುತ್ತದೆ.

ಕ್ರಮೇಣ ಈ ಸಂಗ್ರಹ ಹೆಚ್ಚುತ್ತಾ ಹೋಗಿ ನರಗಳ ಒಳಭಾಗದ ವ್ಯಾಸವನ್ನು ಕಿರಿದುಗೊಳಿಸುವುದರಿಂದ ಹೃದಯ ಹೆಚ್ಚಿನ ಒತ್ತಡದಲ್ಲಿ ರಕ್ತವನ್ನ ದೂಡಿಕೊಡಬೇಕಾಗುತ್ತದೆ.

ಸೇಬಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿ ಸಂಚರಿಸುವ ಮೂಲಕ ನರಗಳ ಒಳಭಾಗದಲ್ಲಿ ಅಂಟಿಕೊಂಡಿರುವ ಈ ಜಿಡ್ಡನ್ನು ಸಡಿಲಗೊಳಿಸುತ್ತವೆ.ಪರಿಣಾಮವಾಗಿ ಕೆಟ್ಟ ಕೊಲೆಸ್ಟ್ರಾಲ್ ರಕ್ತದೊಡನೆ ಹರಿದು ಹೋಗಿ ಶೋಧನಾ ವ್ಯವಸ್ಥೆಯ ಮೂಲಕ ವಿಸರ್ಜಿಸಲ್ಪಡುತ್ತದೆ.

ಹೃದಯದ ಒತ್ತಡ ಸಾಮಾನ್ಯಕ್ಕೆ ಹಿಂದಿರುಗಿ ಉತ್ತಮ ಆರೋಗ್ಯ ಲಭಿಸುತ್ತದೆ.ಅಲ್‌ಝೈಮರ್ ಕಾಯಿಲೆ (ನಿಧಾನವಾಗಿ ಮೆದುಳಿನ ಕ್ಷಮತೆಯನ್ನು ಕ್ಷೀಣಿಸುವ ಕಾಯಿಲೆ)ಯನ್ನು ತಡೆಯುತ್ತದೆ.

ಈ ಕಾಯಿಲೆ ಹೇಗೆ ಬರುತ್ತದೆ, ಯಾವಾಗ ಬರುತ್ತದೆ ಎಂದು ಖಚಿತವಾಗಿ ಹೇಳಬಲ್ಲ ವಿಧಾನ ಇನ್ನೂ ಲಭ್ಯವಿಲ್ಲ. ಕಾಯಿಲೆ ಬಂದ ಬಳಿಕ ನಿಖರವಾದ ಚಿಕಿತ್ಸೆಯೂ ಇಲ್ಲ. ಕೇವಲ ಕಾಯಿಲೆ ಉಲ್ಬಣಾವಸ್ಥೆಗೆ ಏರುವ ಗತಿಯನ್ನು ನಿಧಾನಗೊಳಿಸಿ ಮರಣ ದಿನಾಂಕವನ್ನು ಕೊಂಚ ಮುಂದೂಡಬಹುದಷ್ಟೇ.

ಅಂಕಿ ಅಂಶಗಳ ಪ್ರಕಾರ ಸುಮಾರು ಅರವತ್ತು ವರ್ಷದ ಬಳಿಕ ಈ ಕಾಯಿಲೆ ಆವರಿಸುವ ಕಾರಣ ‘ಅರವತ್ತರಲ್ಲಿ ಅರಳು ಮರಳು’ ಎಂಬ ಗಾದೆಯೂ ಹುಟ್ಟಿಕೊಂಡಿದೆ.

ಆದರೆ ಪ್ರತಿದಿನ ಸೇಬುಹಣ್ಣನ್ನು ತಿನ್ನುವ ಮೂಲಕ acetylcholine ಎಂಬ ನರಸಂದೇಶವಾಹಕ (neurotransmitter) ರಕ್ತದಲ್ಲಿ ಸೇರಿ ಈ ಕಾಯಿಲೆ ಯನ್ನು ತಡೆಗಟ್ಟುತ್ತದೆ.

ಹಣ್ಣಿಗಿಂತಲೂ ಹಣ್ಣಿನ ರಸ ಹೆಚ್ಚು ಪರಿಣಾಮಕಾರಿ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ.

ಮಧುಮೇಹ ಕಾಯಿಲೆ ಯನ್ನು ತಡೆಯುತ್ತದೆ:

ಮಧುಮೇಹ ದೇಹದ ಸಕ್ಕರೆಯನ್ನು ಕರಗಿಸಲು ಅಗತ್ಯವಾದ ಇನ್ಸುಲಿನ್ ಉತ್ಪಾದನೆಯನ್ನು ಕುಂಠಿತಗೊಳಿಸುವ ಅಥವಾ ಉತ್ಪಾದನೆಯಾದ ಇನ್ಸುಲಿನ್ ಬಳಕೆಯಾಗದೇ ಸಕ್ಕರೆ ವ್ಯರ್ಥವಾಗುವ ಒಂದು ಕಾಯಿಲೆ .

ಸೇಬುಹಣ್ಣಿನಲ್ಲಿರುವ phytonutrient ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತವೆ.

ತಿಂದ ಆಹಾರದಿಂದ ಎಷ್ಟು ಬೇಗನೇ ಪೋಷಕಾಂಶಗಳು ರಕ್ತವನ್ನು ಸೇರುತ್ತವೆ ಎಂದು ಗಮನಿಸುವ ಜಿ.ಐ. ಸೂಚಿಕೆ glycemic index or glycaemic index (GI) ಪ್ರಕಾರ ಸೇಬು ಕಡಿಮೆ ಜಿ.ಐ. ಹೊಂದಿದೆ.

ಅಂದರೆ ತಿಂದ ಆಹಾರದಿಂದ ಪೋಷಕಾಂಶಗಳು ನಿಧಾನವಾಗಿ ಹಾಗೂ ಅಗತ್ಯಕ್ಕೆ ತಕ್ಕಂತೆ ರಕ್ತಕ್ಕೆ ಸೇರುವುದರಿಂದ ಉತ್ತಮ ಆರೋಗ್ಯ ಲಭ್ಯವಾಗುತ್ತದೆ.
ಅಲ್ಲದೇ polyphenols ಎಂಬ ಪೋಷಕಾಂಶವೂ ಗ್ಲುಕೋಸ್ ಸಕ್ಕರೆ ಶೀಘ್ರವಾಗಿ ರಕ್ತದೊಡನೆ ಬೆರೆಯುವುದನ್ನು ತಡೆಯುವ ಮೂಲಕ ಮಧುಮೇಹ ಕಾಯಿಲೆಯಿಂದ ದೂರವಿಡುತ್ತದೆ.

ಶರೀರದ ಬಲಿಷ್ಟತೆಯನ್ನು ಹೆಚ್ಚಿಸುತ್ತದೆ:

ಪ್ರತಿದಿನ ವ್ಯಾಯಾಮದಲ್ಲಿ ಸ್ನಾಯುಗಳು ಬಲಗೊಂಡು ದೇಹ ಬಲಿಷ್ಟವಾಗಲು quercetin ಎಂಬ ಆಂಟಿ ಆಕ್ಸಿಡೆಂಟು ಅಗತ್ಯವಾಗಿದೆ. ಇದರ ಮೂಲಕ ಶ್ವಾಸಕೋಶಗಳಿಂದ ಹೆಚ್ಚಿನ ಆಮ್ಲಜನಕ ರಕ್ತಕ್ಕೆ ಲಭ್ಯವಾಗಿ ಸ್ನಾಯುಗಳು ಉತ್ತಮ ಬೆಳವಣಿಗೆ ಪಡೆಯುತ್ತವೆ.

ದೊಡ್ಡ ಕರುಳಿನ ಕ್ಯಾನ್ಸರ್ ಬರುವುದನ್ನು ತಡೆಗಟ್ಟುತ್ತದೆ :

ನಾವು ಸೇವಿಸಿದ ಆಹಾರದಿಂದ ಚಿಕ್ಕ ಕರುಳಿನಲ್ಲಿ ಆಹಾರ ಪಚನಗೊಂಡ ಬಳಿಕ ದೊಡ್ಡ ಕರುಳಿನಲ್ಲಿ ವಿಸರ್ಜನೆಯಾಗುವವರೆಗೂ ಸಂಗ್ರಹವಾಗಿರುತ್ತದೆ.

ಇಲ್ಲಿ ಉಳಿದ ನೀರನ್ನು ಹಾಗೂ ಕೆಲವು ಪೋಷಕಾಂಶಗಳು ಹೀರಲ್ಪಡುತ್ತವೆ. ಸುಲಭ ವಿಸರ್ಜನೆಗೆ ನಮ್ಮ ಆಹಾರದಲ್ಲಿ ಕರಗುವ ಮತ್ತು ಕರಗದ ನಾರುಗಳಿರುವುದು ಅವಶ್ಯ. ಕರಗದ ನಾರುಗಳಿಂದ ವಿಸರ್ಜನೆ ಸುಲಭವಾಗುತ್ತದೆ.

ಕರಗುವ ನಾರಿನಿಂದ ಮಲವು ಗಟ್ಟಿಯಾಗುವುದನ್ನು ತಡೆಯುತ್ತದೆ. ಒಂದು ವೇಳೆ ನಮ್ಮ ಆಹಾರದಲ್ಲಿ ಈ ನಾರುಗಳು ಇಲ್ಲದಿದ್ದರೆ ನೀರು ಹೀರಿದ ಬಳಿಕ ಉಳಿದ ತ್ಯಾಜ್ಯ ಗಟ್ಟಿಯಾಗಿ ಸುಲಭವಾದ ಚಲನೆಗೆ ಅಡ್ಡಿಯಾಗುತ್ತದೆ.

ಪರಿಣಾಮವಾಗಿ ಮೂಲವ್ಯಾಧಿ ಹಾಗೂ ದೊಡ್ಡ ಕರುಳಿನೊಳಗೆ ಗಂಟುಗಳಾಗಿ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಆದುದರಿಂದ ನಮ್ಮ ಆಹಾರದಲ್ಲಿ ಸಾಕಷ್ಟು ನಾರು ಇರುವುದು ಅಗತ್ಯ. ಸೇಬು ಹಣ್ಣಿನಲ್ಲಿ ಕರಗುವ ನಾರು ಧಾರಾಳವಾಗಿರುವುದರಿಂದ (9%) ದೊಡ್ಡ ಕರುಳಿನಲ್ಲಿ ಕರಗಿ ತ್ಯಾಜ್ಯ ಸುಲಭವಾಗಿ ವಿಸರ್ಜಿಸಲು ನೆರವಾಗುತ್ತದೆ.

ಕಣ್ಣಿನ ಪೊರೆ (cataract) ಬರದಂತೆ ತಡೆಯುತ್ತದೆ :

ಮಧುಮೇಹದ ಒಂದು ಪರಿಣಾಮವೆಂದರೆ ಕಣ್ಣಿನ ಪೊರೆ. ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾದಾಗ ಪೊರೆಯಾಗುವ ಸಂಭವವೂ ಹೆಚ್ಚುತ್ತದೆ. ಸೇಬಿನಲ್ಲಿರುವ ವಿಟಮಿನ್ ಸಿ, ಇ. ಮತ್ತು ಬೀಟಾ ಕ್ಯಾರೋಟೀನ್ ನಂತಹ ಆಂಟಿ ಆಕ್ಸೆಡೆಂಟುಗಳು ಕಣ್ಣಿನ ಪೊರೆ ಬರುವುದನ್ನು ತಡೆಯುತ್ತವೆ.

ತ್ವಚೆಯ ಹೊಳಪು ಹೆಚ್ಚುತ್ತದೆ :

ವಯಸ್ಸಾದಂತೆ ಚರ್ಮ ಹೊಳಪು ಕಳೆದುಕೊಂಡು ನೆರಿಗೆಗಳು ಮೂಡುತ್ತಾ ಬರುತ್ತವೆ. ಇದನ್ನು ತಡೆಯಲು ಸಾಧ್ಯವಿಲ್ಲವಾದರೂ ಪರಿಣಾಮವನ್ನು ನಿಧಾನಗೊಳಿಸಲು ಸಾಧ್ಯವಿದೆ.

ಸೇಬಿನಲ್ಲಿರುವ ಹಲವು ಆಂಟಿ ಆಕ್ಸೆಡೆಂಟುಗಳ ಪರಿಣಾಮವಾಗಿ ಚರ್ಮದ ಜೀವಕೋಶಗಳು ನಾಶವಾಗಿ ನೆರಿಗೆ ಮೂಡುವುದು ನಿಧಾನವಾಗುತ್ತದೆ.

ಹೃದಯಕ್ಕೂ ರಕ್ಷಣೆ ಒದಗಿಸುತ್ತದೆ:

ಹೃದಯ ಸ್ಥಂಬನಕ್ಕೆ ಕೆಟ್ಟ ಕೊಲೆಸ್ಟ್ರಾಲ್ ನೇರವಾಗಿ ಕಾರಣವಲ್ಲ. ಕೆಟ್ಟ ಕೊಲೆಸ್ಟ್ರಾಲ್ ಆಮ್ಲಜನಕದೊಂದಿಗೆ ರಸಾಯನಿಕವಾಗಿ ಸಂಯೋಜನೆಗೊಂಡಾಗ (oxidation) ರಕ್ತನಾಳಗಳು ಗಟ್ಟಿಯಾಗತೊಡಗುತ್ತವೆ (atherosclerosis).

ಇದು ಹೃದಯ ಸ್ಥಂಭನಕ್ಕೆ ಕಾರಣವಾಗುತ್ತದೆ. ಸೇಬು ಹಣ್ಣಿನಲ್ಲಿರುವ Polyphenols ಈ ಕ್ರಿಯೆಯನ್ನು ನಿಧಾನಗೊಳಿಸಿ ಹೃದಯಕ್ಕೆ ರಕ್ಷಣೆ ಒದಗಿಸುತ್ತದೆ.

ಆರೋಗ್ಯವಂತ, ಬಿಳಿಯ ದಂತಗಳಿಗೆ ಉತ್ತಮವಾಗಿದೆ:

ಬಾಯಿಯೊಳಗೆ ಸದಾ ಜೊಲ್ಲಿನ ತೇವವಿದ್ದರೆ ಬ್ಯಾಕ್ಟೀರಿಯಾಗಳ ಧಾಳಿ ತಗ್ಗುತ್ತದೆ. ಒಣಗಿದ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಒಸಡುಗಳಿಗೆ ಧಾಳಿಯಿಟ್ಟು ಹಲ್ಲುಗಳ ಹಳದಿಯಾಗುವಿಕೆಗೆ ಕಾರಣವಾಗುತ್ತದೆ.

ಸೇಬುಹಣ್ಣನ್ನು ಅಗಿಯುವ ಮೂಲಕ ಬಾಯಿಯಲ್ಲಿ ಧಾರಾಳವಾಗಿ ಜೊಲ್ಲು ಉತ್ಪತ್ತಿಯಾಗಿ ಬ್ಯಾಕ್ಟೀರಿಯಾಗಳು ನಿರ್ನಾಮವಾಗುತ್ತವೆ.

ಅಸ್ತಮಾ ರೋಗದ ಸಂಭವನ್ನು ಕಡಿಮೆಗೊಳಿಸುತ್ತದೆ:

flavanoids ಮತ್ತು phenolic acid ಎಂಬ ಪೋಷಕಾಂಶಗಳು ಶ್ವಾಸಕೋಶದ ವಾಯುನಾಳಗಳು ಸಂಕುಚಿತವಾಗುವುದನ್ನು ತಡೆದು ಅಸ್ತಮಾ ರೋಗವನ್ನು ತಡೆಯುತ್ತವೆ.

ಕಂಪನ ವ್ಯಾಧಿ (Parkinson’s Disease) ಯಿಂದ ರಕ್ಷಿಸುತ್ತದೆ :

ಮೆದುಳಿನಲ್ಲಿ ಉತ್ಪತ್ತಿಯಾಗುವ ಡೋಪಮೈನ್ ಎಂಬ ಕಿಣ್ವ ನಿಗದಿತ ಪ್ರಮಾಣದಲ್ಲಿ ಉತ್ಪತ್ತಿಯಾಗದಿದ್ದರೆ ಬರುವ ಕಂಪನ ವ್ಯಾಧಿ ದಿನಿನಿತ್ಯದ ಕೆಲಸಗಳನ್ನು ಸುಲಭವಾಗಿ ಮಾಡಲು ಅಡ್ಡಿಪಡಿಸುತ್ತದೆ.ಕೈಕಾಲುಗಳು ನಡುಗತೊಡಗುತ್ತವೆ.

ಒಂದು ಚಮಚವನ್ನೂ ನಡುಗದೇ ಹಿಡಿಯಲು ಸಾಧ್ಯವಿಲ್ಲ. ಸೇಬು ಹಣ್ಣಿನಲ್ಲಿರುವ ಹಲವು ಆಂಟಿ ಆಕ್ಸಿಡೆಂಟುಗಳು ಡೋಪಮೈನ್ ಉತ್ಪತ್ತಿಗೆ ನೆರವಾಗಿ ಕಂಪನ ವ್ಯಾಧಿಯಿಂದ ಕಾಪಾಡುತ್ತದೆ.

ಪಿತ್ತಕೋಶದಲ್ಲಿ ಉಂಟಾಗುವ ಕಲ್ಲುಗಳನ್ನು (gallstones) ತಡೆಗಟ್ಟುತ್ತದೆ:

ಪಿತ್ತಕೋಶದಲ್ಲಿ ಕಲ್ಲುಗಳು ಉಂಟಾದರೆ ಸೇಬುಹಣ್ಣಿನಲ್ಲಿರುವ ಮ್ಯಾಲಿಕ್ ಆಸಿಡ್ ಎಂಬ ಪೋಷಕಾಂಶ ಆ ಕಲ್ಲುಗಳನ್ನು ಮೃದುಗೊಳಿಸಿ ನಿವಾರಣೆಗೆ ನೆರವಾಗುತ್ತವೆ.
ಸುಲಭ ಮಲವಿಸರ್ಜನೆಗೆ ನೆರವಾಗುತ್ತದೆ ಸೇಬುಹಣ್ಣಿನಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇರುವುದರಿಂದ ಸುಲಭ ಮಲವಿಸರ್ಜನೆಗೆ ಸಹಕಾರಿಯಾಗಿದೆ.

ರಕ್ತಹೀನತೆಯನ್ನು ತೊಲಗಿಸುತ್ತದೆ :

ರಕ್ತದಲ್ಲಿ ಕೆಂಪುರಕ್ತಕಣಗಳ ಕೊರತೆಯಿಂದ ನಿಃಶಕ್ತಿಯುಂಟಾಗುತ್ತದೆ. ಈ ನಿಃಶಕ್ತಿಯನ್ನು ನಿವಾರಿಸಲು ಹೆಚ್ಚಿನ ಕಬ್ಬಿಣದ ಅಗತ್ಯವಿದೆ. ಸೇಬಿನಲ್ಲಿ ಹೇರಳವಾಗಿರುವ ಕಬ್ಬಿಣದ ಕಾರಣ ರಕ್ತಹೀನತೆ ಕಡಿಮೆಯಾಗುತ್ತದೆ.

Trending

To Top