ದಿನ ಒಂದು ಬಾದಾಮಿ ತಿಂದರೆ ಏನು ಪ್ರಯೋಜನ…
ದಿನ ಒಂದು ಬಾದಾಮಿ ತಿನ್ನಿ:
ಬಾದಾಮಿ ತಿನ್ನಿ ಆರೋಗ್ಯ ಕಾಪಾಡಿ. ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ.ಆರೋಗ್ಯವೇ ಭಾಗ್ಯ ಎಂಬುದು ಸದ್ಯ ಪ್ರಚಲಿತವಾಗಿರುವ ಮಾತು.
ನಾವು ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ, ಯೋಗ ಮಾಡುವುದರ ಜೊತೆಗೆ ನಾವು ತಿನ್ನುವ ಆಹಾರದಲ್ಲಿಯೂ ಸಮತೋಲನ ಕಾಪಾಡಿಕೊಳ್ಳಬೇಕು.ಯಾವ ಆಹಾರ ತಿಂದರೆ ಎಷ್ಟು ಪೋಷಕಾಂಶಗಳು ಲಭ್ಯ ಎನ್ನುವುದನ್ನುಮನದಟ್ಟು ಮಾಡಿಕೊಳ್ಳಬೇಕಾಗಿದೆ.
ಅಂಥ ಅತ್ಯಧಿಕ ಪೋಷಕಾಂಶ ಹಾಗೂ ಹೇರಳವಾಗಿ ವಿಟಮಿನ್ ಸಿಗುವ ಪದಾರ್ಥ ಬಾದಾಮಿ.
ಬಾದಾಮಿ ಸ್ವಾಭಾವಿಕವಾಗಿ ಅತಿ ಹೆಚ್ಚಿನ ಪ್ರಮಾಣದ ಪೌಷ್ಠಿಕಾಂಶ ಪೂರೈಸುವ ತಿನಿಸು. ಇದರಲ್ಲಿ ಕಡಿಮೆ ಪ್ರಮಾಣದ ಕೊಲೆಸ್ಟ್ಟಾಲ್ ಇರುವುದರಿಂದ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ.ದಿನಕ್ಕೊಂದು ಬಾದಾಮಿ ತಿಂದ್ರೆ ಸಾಕು ಸ್ಮಾರ್ಟ್ ಆಗ್ತೀರಾ ಹೌದು, ಸ್ವಾಸ್ಥ್ಯ, ಸೌಂದರ್ಯ ವರ್ಧನೆಗೆ ಸಹಕಾರಿ ಬಾದಾಮಿ.
ಅಲ್ಮಂಡ್ ಅಥವಾ ಬಾದಾಮಿ ಇದನ್ನು ಕಿಂಗ್ ಆಫ್ ಡ್ರೈ ಫ್ರೂಟ್ಸ್ ಎನ್ನುತ್ತಾರೆ.ಇದು ನಿಜಕ್ಕೂ ಶುಷ್ಕಫಲಗಳ ರಾಜ. ವಿಶ್ವಕ್ಕೆ ಪರಿಚಿತವಾದ ಅತ್ಯಂತ ಹಳೆಯ ಶುಷ್ಕಫಲಗಳಲ್ಲಿ ಇದು ಕೂಡ ಒಂದು. ಇರಾನ್, ಸೌದಿ ಅರೇಬಿಯಾ, ಲೆಬನಾನ್, ಟರ್ಕಿ, ಸಿರಿಯಾ, ಜೋರ್ಡಾನ್ ಮತ್ತು ಇಸ್ರೇಲ್ ದೇಶಗಳಲ್ಲಿ ಮುಖ್ಯವಾಗಿ ಇದು ಕಂಡುಬರುತ್ತವೆ.
ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳಿಗೆ ಸಂತುಲಿತ ಪ್ರಮಾಣದಲ್ಲಿ ಬಾದಾಮಿ ನೀಡುವುದರಿಂದ ಅವರ ಮೆದುಳಿನ ಬೆಳವಣಿಗೆ ಜೊತೆಗೆ ಅವರ ಬುದ್ಧಿಮತ್ತೆಯೂ ವೃದ್ಧಿಯಾಗುತ್ತದೆ.
ಇದರಲ್ಲಿ ಮೆದುಳಿನ ಕಾರ್ಯಕ್ಕೆ ಪ್ರಯೋಜನವಾಗುವ ರಿಬೋಫ್ಲಾವಿನ್ ಮತ್ತು ಎಲ್-ಕಾರಿಟೈನ್ ಎಂಬ ಪೌಷ್ಠಿಕಾಂಶಗಳಿವೆ. ಇದು ಮೆದುಳಿನಲ್ಲಿರುವ ನರಗಳ ಕ್ರಿಯಾ ಚಟುವಟಿಕೆಯನ್ನು ವೃದ್ಧಿಗೊಳಿಸುತ್ತದೆ.
ಇದರಿಂದ ಅಲ್ಝೆಮೈರ್ ರೋಗದ ಸಾಧ್ಯತೆಯನ್ನು ತಡೆಗಟ್ಟುತ್ತದೆ. ಇದರಲ್ಲಿನ ತೈಲವು (ಬಾದಾಮಿ ತೈಲ) ದೇಹದ ಸಮಗ್ರ ಆರೋಗ್ಯ ರಕ್ಷಣೆ ಮತ್ತು ನರಗಳ ಕಾರ್ಯನಿರ್ವಹಣೆಗೆ ಪ್ರಯೋಜನಕಾರಿ.
ಬಾದಾಮಿ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಣ. ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ, ಆರೋಗ್ಯಕರ ಕೊಲೆಸ್ಟರಾಲ್ ಅಂದರೆ ಅಧಿಕ ಸಾಂದ್ರತೆಯ ಲಿಪೊಪ್ರೋಟೀನ್ಗಳು-ಎಚ್ಡಿಎಲ್ ಹೆಚ್ಚಳಕ್ಕೆ ನೆರವಾಗುತ್ತದೆ.
ಬಾದಾಮಿಯಲ್ಲಿರುವ ಪೊಟ್ಯಾಷಿಯಂ, ಮ್ಯಾಂಗನೀಸ್, ಜೀವಸತ್ವಇ, ಕ್ಯಾಲ್ಶಿಯಂ, ಜೀವಸತ್ವ ಬಿ ಕಾಂಪ್ಲೆಕ್ಸ್ ಹಾಗೂ ಇನ್ನಿತರೆ ಪೋಷಕಾಂಶಗಳು ಮಿದುಳಿಗೆ ಪೂರಕವಾಗಿ ಕೆಲಸ ಮಾಡುತ್ತದೆ.
ಜೊತೆಗೆ ನಿದ್ರೆಗೆ ಅನುಕೂಲವಾಗುವ ಹಾರ್ವೇನನ್ನು ಬಿಡುಗಡೆ ಮಾಡುವಲ್ಲಿ ಸಹಾಯ ಮಾಡುತ್ತದೆ.
ಅರ್ಧಲೋಟ ಬಿಸಿ ಹಾಲಿಗೆ ನೆನೆಸಿಟ್ಟ ಬಾದಾಮಿ ಹಾಗೂ ಉದ್ದಿನಕಾಳಿನ ಪೇಸ್ಟ್(ಅರ್ಧಚಮಚ), ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ ಮಿಶ್ರಣ ಮಾಡಬೇಕು.
ಇದನ್ನು ಪ್ರತಿದಿನ ಸೇವಿಸುತ್ತ ಬಂದಲ್ಲಿ ಪುರುಷರ ನಪುಂಸಕತ್ವ ತೊಂದರೆ ನಿವಾರಣೆಯಾಗುತ್ತದೆ.
ಬಾದಾಮಿಯು ದೇಹಕ್ಕೆ ಅಗತ್ಯವಾದ ಉತ್ತಮ ಕೊಬ್ಬನ್ನು ಒದಗಿಸುವುದರ ಜೊತೆಗೆ ರಕ್ತನಾಳಗಳಲ್ಲಿರುವ ಅನಗತ್ಯ ಕೊಬ್ಬು ಕರಗಿಸಿ ಜನನಾಂಗಗಳಿಗೆ ರಕ್ತಸಂಚಾರ ಸರಿಯಾಗುವಂತೆ ಮಾಡುತ್ತದೆ.
ಕುದಿಯುತ್ತಿರುವ ಹಾಲಿಗೆ ಅರ್ಧಚಮಚ ಗಸಗಸೆಯನ್ನು ಹಾಗೂ ಅರ್ಧಚಮಚ ಸಿಪ್ಪೆಸಹಿತ ನೆನೆಸಿ ರುಬ್ಬಿದ ಬಾದಾಮಿಯನ್ನು ಹಾಕಿ ಕುದಿಸಬೇಕು.
ಹೀಗೆ ತಯಾರಿಸಿಕೊಂಡ ಪಾನೀಯವನ್ನು ಮಲಗುವ ಒಂದುತಾಸು ಮೊದಲು ಅಥವಾ ಊಟಕ್ಕಿಂತ ಒಂದು ತಾಸು ಮೊದಲು ಕುಡಿಯಬೇಕು. ಇದರಿಂದ ನಿದ್ರಾಹೀನತೆ ಸಮಸ್ಯೆ ಪರಿಹಾರವಾಗುತ್ತದೆ.
ರಾತ್ರಿ 10-12 ಬಾದಾಮಿಯನ್ನು ನೆನೆಸಿಟ್ಟು ಬೆಳಿಗ್ಗೆ ರುಬ್ಬಿಕೊಳ್ಳಬೇಕು. ಬಾರ್ಲಿ ನೀರನ್ನು ತಯಾರಿಸಿಕೊಂಡು (2 ಚಮಚ ಬಾರ್ಲಿ ಅಕ್ಕಿಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಕುದಿಸಿದರೆ ಬಾರ್ಲಿನೀರು ತಯಾರಾಗುತ್ತದೆ) ಅದಕ್ಕೆ ರುಬ್ಬಿದ ಮಿಶ್ರಣ ಹಾಕಿ ಕುಡಿಯಬೇಕು. ಇದರಿಂದಾಗಿ ಮೂತ್ರಕೋಶದಲ್ಲಿ ಕಲ್ಲು ಬೆಳೆಯುವುದನ್ನು ತಡೆಯಬಹುದು.
ಮಹಿಳೆಯರಲ್ಲಿ ಹೆಚ್ಚಾಗಿ ಕಾಡುವ ಅನೀಮಿಯಾ ಅಥವಾ ರಕ್ತಹೀನತೆ ಸಮಸ್ಯೆಗೆ ಬಾದಾಮಿಯನ್ನು ಹಾಲಿಗೆ ಹಾಕಿ ಅದಕ್ಕೆ ಕೆಂಪು ಕಲ್ಲುಸಕ್ಕರೆಯನ್ನು ಬೆರೆಸಿ ಪ್ರತಿನಿತ್ಯ ಕುಡಿಯುತ್ತ ಬಂದಲ್ಲಿ ಈ ಸಮಸ್ಯೆಯು ಪರಿಹಾರವಾಗುತ್ತದೆ.
ಮಧುಮೇಹಿಗಳು ಪ್ರತಿದಿನ 20 ಬಾದಾಮಿಯನ್ನು ಸೇವಿಸಿದರೆ ಹೃದಯ ಸಮಸ್ಯೆಯುಂಟಾಗುವುದನ್ನು ಕಡಿಮೆಮಾಡಬಹುದು.
ಬಾದಾಮಿಯ ಎಲೆಗಳನ್ನು ಉಪಯೋಗಿಸಿಕೊಂಡು ಅದನ್ನು ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಬೇಕು.
ಹಾಗೆ ತಯಾರಾದ ಲೇಪನವನ್ನು ಸಂದುನೋವು ಇರುವಲ್ಲಿ ಹಚ್ಚಿ ಬಾದಾಮಿ ಎಲೆಯಿಂದ ಮುಚ್ಚಿ ಕಟ್ಟಬೇಕು. ಇದರಿಂದಾಗಿ ನೋವು ಹಾಗೂ ಬಾವು ಕಡಿಮೆಯಾಗುತ್ತದೆ.
ಚರ್ಮದಮೇಲೆ ಗುಳ್ಳೆ ಅಥವಾ ತುರಿಕೆಯಿದ್ದರೂ ಸಹ ಈ ಲೇಪನದಿಂದ ಮಸಾಜ್ ಮಾಡಿದಲ್ಲಿ ಅದೂ ಉಪಶಮನವಾಗುತ್ತದೆ.
ರಾತ್ರಿ 10-12 ಬಾದಾಮಿ ನೆನೆಸಿ ಬೆಳಿಗ್ಗೆ ರುಬ್ಬಿ ಅದಕ್ಕೆ ಹಾಲಿನ ಕೆನೆಯನ್ನು ಸೇರಿಸಿ ಲೇಪನ ಮಾಡಿ ಮುಖಕ್ಕೆ ಹಚ್ಚಿದಲ್ಲಿ ಮುಖದ ಮೇಲಿನ ಕಪ್ಪುಕಲೆಗಳು
ಕಡಿಮೆಯಾಗುವುದಲ್ಲದೆ ಮುಖದ ಸೌಂದರ್ಯವೂ ಸಹ ವೃದ್ಧಿಯಾಗುತ್ತದೆ.ಬಾದಾಮಿಯ ಅಂಟನ್ನು ರಾತ್ರಿ ನೆನೆಸಿ ಬೆಳಿಗ್ಗೆ ಅದಕ್ಕೆ ಕಲ್ಲುಸಕ್ಕರೆಯನ್ನು ಸೇರಿಸಿ ಕುಡಿಯುವುದರಿಂದ ಬೇಧಿ ಸಮಸ್ಯೆ ನೀಗುತ್ತದೆ.
