ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನೆಮಾ ರಾಬರ್ಟ್ ಇದೇ ಡಿಸೆಂಬರ್ 25 ಕ್ರಿಸ್ಮಸ್ ಹಬ್ಬದಂದು ಬಿಡುಗಡೆಯಾಗಲಿದೆ ಎಂಬ ಮಾತುಗಳು ಚಂದನವನದಲ್ಲಿ ಕೇಳಿ ಬರುತ್ತಿದೆ. ಈ ಚಲನಚಿತ್ರದಲ್ಲಿ ದರ್ಶನ್ ಜೊತೆಗೆ ವಿನೋಧ್ ಪ್ರಭಾಕರ್, ಜಗಪತಿಬಾಬು, ಚಿಕ್ಕಣ್ಣ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿಕೊಂಡಿದ್ದಾರೆ.
ಕಳೆದ ಏಪ್ರಿಲ್ 7 ರಂದು ರಾಬರ್ಟ್ ಚಿತ್ರ ಬಿಡುಗಡೆಯಾಗಬೇಕಿತ್ತು, ಆದರೆ ಕೊರೋನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಸಿನೆಮಾ ರಿಲೀಸ್ ಮಾಡಲು ಸಾಧ್ಯವಾಗಲಿಲ್ಲ. ಪ್ರಸ್ತುತ ಲಾಕ್ಡೌನ್ ತೆರವುಗೊಂಡ ಹಿನ್ನೆಲೆಯಲ್ಲಿ ಡಿ.25 ರಂದು ಸಿನೆಮಾ ಪ್ರೇಕ್ಷಕರ ಮುಂದೆ ಬರಲಿದೆ ಎನ್ನಲಾಗುತ್ತಿದ್ದು, ಆ ಮೂಲಕ ವರ್ಷಾಂತ್ಯಕ್ಕೆ ಸಿನೆಮಾ ರಸಿಕರಿಗೆ ದೊಡ್ಡ ಮಟ್ಟದಲ್ಲಿ ಮನರಂಜನೆ ದೊರೆಯಲಿದೆ ಎಂದು ತಿಳಿದುಬಂದಿದೆ.
ಇನ್ನೂ ಹಿಂದಿ ಭಾಷೆಯಲ್ಲಿ ದರ್ಶನ್ ಚಿತ್ರಗಳಿಗೆ ಭಾರಿ ಬೇಡಿಕೆಯಿದ್ದು, ದೊಡ್ಡ ಮೊತ್ತಕ್ಕೆ ಅವರ ಸಿನೆಮಾಗಳು ಹಿಂದಿ ಭಾಷೆಗೆ ಡಬ್ಬಿಂಗ್ ರೈಟ್ಸ್ ಮಾರಾಟವಾಗುತ್ತದೆ. ಪ್ರಸ್ತುತ ರಾಬರ್ಟ್ ಚಿತ್ರಕ್ಕೂ ಕೂಡ ಡಿಮಾಂಡ್ ಶುರುವಾಗಿದ್ದು, ದೊಡ್ಡ ಮೊತ್ತದಲ್ಲಿ ಹಣ ನೀಡಲು ನಿರ್ಮಾಣ ಸಂಸ್ಥೆಗಳು ಮುಂದಾಗಿದೆ ಎನ್ನಲಾಗುತ್ತಿದೆ. ಆದರೆ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಮಾತ್ರ ಇನ್ನೂ ಮಾರಾಟಕ್ಕೆ ಮುಂದಾಗಿಲ್ಲ, ಎಲ್ಲಾ ವ್ಯವಹಾರಗಳು ಮುಗಿದ ಮೇಲೆ ಈ ಕುರಿತು ಮಾಹಿತಿ ನೀಡಲಿದ್ದಾರೆ ಎಂದೂ ಸಹ ತಿಳಿದು ಬಂದಿದೆ.
ರಾಬರ್ಟ್ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸುತ್ತಿದ್ದು, ಭದ್ರವಾತಿ ಬೆಡಗಿ ಆಶಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತ ನಟ ಜಗಪತಿ ಬಾಬು ಚಿತ್ರದಲ್ಲಿ ನಟಿಸಿರುವುದು ಚಿತ್ರದ ಮತ್ತೊಂದು ವಿಶೇಷವಾಗಿದೆ. ಕನ್ನಡ ಭಾಷೆಯ ಜೊತೆಗೆ ಏಕಕಾಲದಲ್ಲಿ ಹಲವು ಭಾಷೆಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
