ಚೆನೈ: ಕಾಲಿವುಡ್ ಸ್ಟಾರ್ ನಟ ಧನುಷ್ ಅಭಿನಯದ ಜಗಮೇ ತಾಂಡಿರಮ್ ಎಂಬ ಸಿನೆಮಾ ನೆಟ್ಪ್ಲಿಕ್ಸ್ ಒಟಿಟಿ ಗೆ ಭಾರಿ ಮೊತ್ತಕ್ಕೆ ಸೇಲ್ ಆಗಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಸುಮಾರು ೫೫ ಕೋಟಿ ಮೊತ್ತಕ್ಕೆ ಈ ಚಿತ್ರ ಸೇಲ್ ಆಗಿದೆ ಎನ್ನಲಾಗುತ್ತಿದೆ.
ಲಾಕ್ಡೌನ್ ಸಡಲಿಕೆ ನಂತರ ಸ್ಟಾರ್ ನಟರು ತಮ್ಮ ಸಿನೆಮಾಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಿದ್ದವಾಗಿದ್ದಾರೆ. ಆದರೆ ಕಾಲಿವುಡ್ ಸ್ಟಾರ್ ನಟ ಧನುಷ್ ಅಭಿನಯದ ಜಗಮೇ ತಾಂಡಿರಮ್ ಚಿತ್ರವನ್ನು ಸಿನೆಮಾ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡುವುದರ ಬದಲಿಗೆ ನೆಟ್ಫ್ಲಿಕ್ಸ್ ಒಟಿಟಿ ಮೂಲಕ ಬಿಡುಗಡೆಯಾಗಲಿದ್ದು, ನೆಟ್ಪ್ಲಿಕ್ಸ್ ದುಬಾರಿ ಮೊತ್ತಕ್ಕೆ ಈ ಚಿತ್ರವನ್ನು ಖರೀದಿಸಿದೆ ಎನ್ನಲಾಗುತ್ತಿದೆ. ಇಷ್ಟೊಂದು ದೊಡ್ಡ ಮೊತ್ತಕ್ಕೆ ಸೇಲ್ ಆದ ತಮಿಳು ಸಿನೆಮಾ ಎಂಬ ಖ್ಯಾತಿಗೆ ಜಗಮೇ ತಾಂಡಿರಮ್ ಪಾತ್ರವಾಗಿದೆ.
ಈ ಚಿತ್ರದಲ್ಲಿ ಧನುಷ್, ಐಶ್ವರ್ಯಾ ಲಕ್ಷ್ಮೀ ಸೇರಿದಂತೆ ಕೆಲವು ವಿದೇಶಿ ಕಲಾವಿದರೂ ಸಹ ನಟಿಸಿದ್ದು, ಆಕ್ಷನ್ ಜೊತೆಗೆ ಕಾಮಿಡಿ ಆಧಾರಿತ ಸಿನೆಮಾ ಇದಾಗಿದೆಯಂತೆ. ಇನ್ನೂ ಈ ಚಿತ್ರವನ್ನು ಯುವ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಿದ್ದಾರೆ. ಎಸ್.ಶಶಿಕಾಂತ್, ರಾಮಚಂದ್ರ ಹಾಗೂ ಚಕ್ರವರ್ತಿ ಎಂಬುವವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ನೆಟ್ಪ್ಲಿಕ್ಸ್ ಸಹ ಜಗಮೇ ತಾಂಡಿರಮ್ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ತಿಳಿದುಬಂದಿದೆ.
ಇನ್ನೂ ಧನುಷ್ ಈಗಾಗಲೇ ಹಾಲಿವುಡ್ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದು, ಈ ಸಿನೆಮಾ ಕೂಡ ನೆಟ್ಪ್ಲಿಕ್ಸ್ ನಲ್ಲೆ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಅಂದಹಾಗೆ ಈ ಸಿನೆಮಾವನ್ನು ಹಾಲಿವುಡ್ ಅವೆಂಜರ್ಸ್ ಖ್ಯಾತಿಯ ನಿರ್ದೇಶಕರ ಸಾರಥ್ಯದಲ್ಲಿ ಚಿತ್ರ ಮೂಡಿಬರಲಿದೆ.
