ಬೆಂಗಳೂರು: ಹೊಸ ವರ್ಷ ಆಚರಣೆಗೆ ಕೊರೋನಾ ಹಿನ್ನೆಲೆಯಲ್ಲಿ ತಮ್ಮ ತಮ್ಮ ಮನೆಗಳಲ್ಲಿಯೇ ಆಚರಿಸುವಂತೆ ಸರ್ಕಾರ ತಿಳಿಸಿದ್ದು, ಮನೆಯಲ್ಲೇ ಪಾರ್ಟಿ ಮಾಡಲು ಚಂದನ್ ಶೆಟ್ಟಿ ಪಾರ್ಟಿ ಸಾಂಗ್ ಚಿತ್ರೀಕರಣಕ್ಕೆ ಸಿದ್ದರಾಗುತ್ತಿದ್ದಾರೆ.
ಈಗಾಗಲೇ ಬಹು ನಿರೀಕ್ಷಿತ ಪೊಗರು ಚಿತ್ರದಲ್ಲಿನ ಖರಾಬು ಹಾಡಿನ ಮೂಲಕ ಸಂಗೀತ ಪ್ರಿಯರಲ್ಲಿ ಅಲೆ ಎಬ್ಬಿಸಿದಂತಹ ಗಾಯಕ ಚಂದನ್ ಶೆಟ್ಟಿ ಈ ಹಿಂದೆ ಟಕೀಲಾ, ಮೂರೇ ಮೂರು ಪೆಗ್ಗಿಗೆ ಮೊದಲಾದ ಪಾರ್ಟಿ ಹಾಡುಗಳ ಬಿಡುಗಡೆ ನಂತರ ಬೇರೆ ಪಾರ್ಟಿ ಹಾಡುಗಳತ್ತ ಮನಸ್ಸು ತೋರಿರಲಿಲ್ಲ. ಇನ್ನೂ ಹೊಸ ವರ್ಷಕ್ಕೆ ಜನರಲ್ಲಿ ಪಾರ್ಟಿ ಮೂಡ್ ತರಿಸುವ ನಿಟ್ಟಿನಲ್ಲಿ ಒಂದಷ್ಟು ವಿಶೇಷತೆಗಳೊಂದಿಗೆ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಹಾಡುಗಳ ಚಿತ್ರೀಕರಣ ಮೂಡಿಬರಲಿದೆ.
ಇನ್ನೂ ಈ ಹಾಡುಗಳು ಅದ್ದೂರಿ ವೆಚ್ಚದಲ್ಲಿ, ಸೂಪರ್ ಸೆಟ್ ಗಳಲ್ಲಿ ಎರಡು ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ಬೆಂಗಳೂರಿನ ಪ್ರಖ್ಯಾತ ಹೋಟೆಲ್ಗಳು ಹಾಗೂ ಪಬ್ ಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದೆ. ಇನ್ನೂ ಈ ಹಾಡು ’ಪಾರ್ಟಿ ಫ್ರೀಕ್’ ಹೆಸರಿನಡಿ, ಯುನೈಟ್ ಅಡಿಯೋಸ್ ನಲ್ಲಿ ಡಿ.26 ರಂದು ರಿಲೀಸ್ ಆಗಲಿದೆ. ಮುಖ್ಯವಾಗಿ ಈ ಚಿತ್ರದಲ್ಲಿ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಸಹ ಹೆಜ್ಜೆ ಹಾಕಿದ್ದಾರೆ. ಜೊತೆಗೆ ನಟಿ ನಿಶ್ವಿಕಾ ನಾಯ್ಡು ಮಸ್ತ್ ಡ್ಯಾನ್ಸ್ ಮಾಡಲಿದ್ದಾರಂತೆ. ಈ ಹಾಡಿಗೆ ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದು, ಸಂಗೀತ, ಸಾಹಿತ್ಯ ಹಾಗೂ ಗಾಯನವನ್ನು ಚಂದನ್ ಶೆಟ್ಟಿ ಮಾಡಲಿದ್ದಾರೆ.
