ನವದೆಹಲಿ: ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೆ ತಂದ ನಿಯಮಗಳನ್ನು ಸಡಿಲಿಸಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದ್ದು, ಇದನ್ನು ಕೂಡಲೇ ಹಿಂಪಡೆಯಬೇಕೆಂದು ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಕೊರೋನಾ ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶವ್ಯಾಪಿ ಲಾಕ್ ಡೌನ್ ಹೇರಲಾಗಿತ್ತು. ನಂತರ ಕ್ರಮೇಣ ಲಾಕ್ ಡೌನ್ ನಿಯಮಗಳನ್ನು ಸಡಿಲಿಸುತ್ತಾ ಬಂತು. ಲಾಕ್ ಡೌನ್ ನಿಂiiಮಗಳ ಭಾಗವಾಗಿ ಚಿತ್ರಮಂದಿರಗಳಲ್ಲಿ ಶೇ.೮೦ ರಷ್ಟು ಆಸನಗಳ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಕೆಲವು ದಿನಗಳ ಹಿಂದೆಯಷ್ಟೆ ತಮಿಳುನಾಡು ಸರ್ಕಾರ ಈ ನಿಯಮಕ್ಕೆ ಬದಲಾವಣೆ ತಂದು, ಪೂರ್ಣ ಪ್ರಮಾಣದ ಆಸನಗಳ ಭರ್ತಿಗೆ ಅವಕಾಶ ನೀಡಲು ಅನುಮತಿ ನೀಡಿತ್ತು ತಮಿಳುನಾಡು ಸರ್ಕಾರ.
ಇದೀಗ ಈ ಅನುಮತಿಯನ್ನು ಕೇಂದ್ರ ಗೃಹ ಇಲಾಖೆ ಆಕ್ಷೇಪಿಸಿದ್ದು, ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲ ರವರು ತಮಿಳುನಾಡು ಮುಖ್ಯ ಕಾರ್ಯದರ್ಶಿ ಕೆ.ಷಣ್ಮುಗನ್ ರವರಿಗೆ ಪತ್ರ ಬರೆದಿದೆ. ತಮಿಳುನಾಡು ಸರ್ಕಾರ ಚಿತ್ರಮಂದಿರಗಳಲ್ಲಿ ಶೇ.೧೦೦ ಆಸನಗಳ ಭರ್ತಿಗೆ ಅವಕಾಶ ನೀಡಿದ್ದು, ಕೇಂದ್ರ ಗೃಹ ಇಲಾಖೆ ಕಳೆದ ಡಿಸೆಂಬರ್ ೨೮ ರಂದು ಹೊರಡಿಸಿದ ಆದೇಶ ಉಲ್ಲಂಘನೆಯಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಈ ಆದೇಶಗಳನ್ನು ಹೊರಡಿಸಿದ್ದು, ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಬಾರದು. ಅವುಗಳನ್ನು ಶಿಸ್ತಿನಿಂದ ಪಾಲನೆ ಮಾಡಬೇಕೆಂದು ಪತ್ರದ ಮೂಲಕ ಸೂಚನೆ ನೀಡಿದೆ. ಸುಪ್ರೀಂ ಕೋರ್ಟ್ ಕೂಡ ಕೇಂದ್ರ ಹೊರಡಿಸಿರುವ ಆದೇಶಗಳನ್ನು ಪಾಲಿಸಬೇಕೆಂದು ಸಹ ಹೇಳಿದ್ದು, ತಾವು ನೀಡಿದ ಅನುಮತಿಯ ಆದೇಶವನ್ನು ಕೂಡಲೇ ಹಿಂಪಡೆದು, ಕೇಂದ್ರದ ನಿಯಮಗಳಂತೆ ಪುನಃ ಆದೇಶ ಹೊರಡಿಸಿ, ಆ ಮಾಹಿತಿಯನ್ನು ಕೇಂದ್ರ ಗೃಹ ಇಲಾಖೆಗೆ ತಲುಪಿಸಬೇಕೆಂದು ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.
