ಹೈದರಬಾದ್: ದೇಶದಲ್ಲೇ ಕಾಂಟ್ರವರ್ಸಿ ಡೈರೆಕ್ಟರ್ ಎಂದೇ ಕರೆಯಲಾಗುವ ಆರ್.ಜಿ.ವಿ. ನಿಜ ಜೀವನದಲ್ಲಿ ನಡೆದ ಕಥೆಗಳನ್ನು ಆಧರಿಸಿ ಸಿನೆಮಾಗಳನ್ನು ನಿರ್ಮಾಣ ಮಾಡುವುದರಲ್ಲಿ ನಿಸ್ಸೀಮರು. ಇದೀಗ ರಾಮ್ಗೋಪಾಲ್ ವರ್ಮಾ ನಿರ್ದೇಶನ ಮಾಡಿದ ದಿಶಾ ಎನ್ಕೌಂಟರ್ ಎಂಬ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ನಿರಾಕರಿಸಿದೆ ಎನ್ನಲಾಗಿದೆ.
ತೆಲಂಗಾಣ ರಾಜ್ಯದಲ್ಲಿ ಕಳೆದ 2019 ರಲ್ಲಿ ನಡೆದಿದ್ದ ಯುವತಿ ಸಾಮೂಹಿಕ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಹಾಗೂ ಅತ್ಯಾಚಾರ ಮಾಡಿದ ಆರೋಪಿಗಳನ್ನು ಎನ್ಕೌಂಟರ್ ಮಾಡಿದ ಘಟನೆಯನ್ನು ಆಧರಿಸಿ ದಿಶಾ ಎನ್ಕೌಂಟರ್ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನೂ ಈ ಸಿನೆಮಾಗೆ ಸೆನ್ಸಾಡ್ ಬೋರ್ಡ್ ಪ್ರಮಾಣಪತ್ರ ನೀಡಲಾಗುವುದಿಲ್ಲ ಎಂದು ಹೇಳಿದೆ.
ಇನ್ನೂ ರಾಮ್ಗೋಪಾಲ್ ವರ್ಮಾ ದಿಶಾ ಎನ್ಕೌಂಟರ್ ಚಿತ್ರವನ್ನು ಸಿನೆಮಾ ಮಂದಿರಗಳಲ್ಲಿಯೇ ಬಿಡುಗಡೆ ಮಾಡಲು ನಿರ್ಧರಿಸಿದ್ದರಂತೆ, ಇದಕ್ಕಾಗಿಯೇ ಸೆನ್ಸಾರ್ಗಾಗಿ ಸಿನೆಮಾವನ್ನು ಕಳಿಸಿದ್ದು, ಸೆನ್ಸಾರ್ ಮಂಡಳಿ ಚಿತ್ರವನ್ನು ನಿರಾಕರಿಸಿದೆಯಂತೆ. ಮೂಲಗಳ ಪ್ರಕಾರ ದಿಶಾ ಎನ್ಕೌಂಟರ್ ಸಿನೆಮಾದಲ್ಲಿನ ದೃಶ್ಯಗಳು ನಿಜವಾಗಿ ನಡೆದ ಘಟನೆಯನ್ನು ಹೋಲುವಂತಿದ್ದು, ಸಂತ್ರಸ್ಥೆಯ ಗುರುತು ಪತ್ತೆ ಆಗುವ ಸಾಧ್ಯತೆ ಇರುವುದರಿಂದ ಸೆನ್ಸಾರ್ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ಸೆನ್ಸಾರ್ ಮಂಡಳಿ ತಿಳಿಸಿದೆ.
ಇನ್ನೂ ಈ ವಿಚಾರ ತಿಳಿದ ಆರ್.ಜಿ.ವಿ. ಸೆನ್ಸಾರ್ ಮಂಡಳಿಯ ಪುನರ್ಪರಿಶೀಲನಾ ಸಮಿತಿಗೆ ದೂರು ನೀಡಿದ್ದು, ಪರಿಶೀಲನಾ ಸಮಿತಿ ಕೂಡ ಆರ್.ಜಿ.ವಿ ದೂರನ್ನು ಪರಗಣಿಸಿದೆ ಎನ್ನಲಾಗಿದೆ. ಈ ಹಿಂದೆ ದಿಶಾ ಎನ್ಕೌಂಟರ್ ಸಿನೆಮಾ ವಿರುದ್ದವಾಗಿಯೂ ಸಹ ಸಂತ್ರಸ್ತೆ ಪೋಷಕರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಆದರೆ ವಿಚಾರಣೆಯ ಬಳಿಕ ಅರ್ಜಿಯನ್ನು ವಜಾಗೊಳಿಸಲಾಗಿತ್ತು ಎನ್ನಲಾಗಿದೆ.
