ಚೆನೈ: ತಮಿಳು ಸಿನಿರಂಗದ ಖ್ಯಾತ ನಟ ವಿಜಯ್ ದಳಪತಿ ಅಭಿನಯದ ಮಾಸ್ಟರ್ ಚಿತ್ರ ಸೂಪರ್ ಡೂಪರ್ ಹಿಟ್ ಹೊಡೆದಿದ್ದು, ಇದೀಗ ತಮ್ಮ ಮುಂದಿನ ಚಿತ್ರದ ಕಡೆ ಪ್ರಯಾಣ ಬೆಳೆಸಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟನೊಬ್ಬ ವಿಲನ್ ಆಗಲಿದ್ದಾನೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಕಾಲಿವುಡ್‌ನ ನಟ ವಿಜಯ್ ಮುಂದಿನ ಸಿನೆಮಾದ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಮೂಡಿತ್ತು. ಇದೀಗ ವಿಜಯ್ ರವರ 65ನೇ ಸಿನೆಮಾವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ ಎಂಬ ಮಾಹಿತಿ ಬಂದಿದ್ದು, ಈ ಚಿತ್ರಕ್ಕೆ ಇನ್ನೂ ಟೈಟಲ್ ಘೋಷಣೆ ಮಾಡಿಲ್ಲ. ಆದರೆ ಈ ಚಿತ್ರದ ಕುರಿತು ಈಗಾಗಲೇ ಇಟ್ರಂಸ್ಟಿಂಗ್ ಸುದ್ದಿಗಳು ಹರಿದಾಡುತ್ತಿದೆ. ಇದರ ಬೆನ್ನಲ್ಲೆ ಬಾಲಿವುಡ್ ನಟನೋರ್ವ ಈ ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಎಂಬ ವಿಚಾರ ಬಲವಾಗಿ ಕೇಳಿಬರುತ್ತಿದೆ.
ಬಾಲಿವುಡ್‌ನ ಖ್ಯಾತ ನಟ ನವಾಜುದ್ದೀನ್ ದಳಪತಿಯ 65ನೇ ಸಿನೆಮಾದಲ್ಲಿ ವಿಲನ್ ಆಗಿ ನಟಿಸಲಿದ್ದು, ಈ ಚಿತ್ರದಲ್ಲಿ ವಿಲನ್ ಪಾತ್ರ ಸಖತ್ ಪವರ್‌ಪುಲ್ ಆಗಿರುವ ಕಾರಣ ನವಾಜುದ್ದೀನ್ ರವರೇ ಈ ಪಾತ್ರದ ಸೂಕ್ತವಾದ ನಟ ಎಂದು ಚಿತ್ರತಂಡ ನಿರ್ಧಾರ ಮಾಡಿದ್ದು, ಅವರನ್ನು ಕರೆತರಲು ಪ್ಲಾನ್ ಮಾಡಿದೆಯಂತೆ. ಕೆಲವೊಂದು ಮಾಹಿತಿ ಪ್ರಕಾರ ಚಿತ್ರತಂಡ ಈಗಾಗಲೇ ನವಾಜುದ್ದೀನ್ ಜೊತೆ ಮಾತುಕತೆ ನಡೆಸಿದ್ದು, ನವಾಜುದ್ದೀನ್ ಒಪ್ಪಿಗೆಗಾಗಿ ಕಾಯುತ್ತಿದೆಯಂತೆ.
ಇನ್ನೂ ಈ ಚಿತ್ರದ ಶೂಟಿಂಗ್ ಕೆಲಸಗಳು ಜೂನ್ ಮಾಹೆಯಿಂದ ಪ್ರಾರಂಭವಾಗಲಿದೆಯಂತೆ. ಈ ಚಿತ್ರಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹಾಕುತ್ತಿದ್ದು, ಸೌತ್ ಇಂಡಿಯಾದ ಬಹುಬೇಡಿಕೆ ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
