ಹೈದರಾಬಾದ್: ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಈಗಾಗಲೇ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಬಹುನಿರೀಕ್ಷಿತ ಆಚಾರ್ಯ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದು, ನಂತರ ಮಲಯಾಳಂ ಚಿತ್ರದ ರಿಮೇಕ್ ಒಂದರಲ್ಲಿ ಚಿರಂಜೀವಿ ನಟಿಸಲಿದ್ದು, ಚಿರುಗೆ ನಾಯಕಿಯಾಗಿ ತ್ರಿಷಾ ಬಣ್ಣ ಹಚ್ಚಲಿದ್ದಾರೆಂಬ ಮಾಹಿತಿ ಹರಿದಾಡುತ್ತಿದೆ.
ಮೆಗಾಸ್ಟಾರ್ ಚಿರಂಜೀವಿ ಹಾಗೂ ಬಹುಬೇಡಿಕೆ ನಟಿ ತ್ರಿಷಾ ಕಳೆದ 2006 ರಲ್ಲಿ ಸ್ಟಾಲಿನ್ ಚಿತ್ರದ ಮೂಲಕ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಂಡಿದ್ದರ. ಇದಾದ ಬಳಿಕ ಯಾವುದೇ ಚಿತ್ರದಲ್ಲಿ ಈ ಇಬ್ಬರ ಕಾಂಬಿನೇಷನ್ನ ಚಿತ್ರ ಬಂದಿರಲಿಲ್ಲ. ಆದರೆ ಆಚಾರ್ಯ ಚಿತ್ರದಲ್ಲಿ ನಟಿ ತ್ರಿಷಾ ರವರಿಗೆ ಅವಕಾಶ ಬಂದಿತ್ತಂತೆ. ಆದರೆ ಕೆಲವೊಂದು ಕಾರಣಾಂತರಗಳಿಂದ ಸಿನೆಮಾದಿಂದ ಹೊರನಡೆದಿದ್ದರು ತ್ರಿಷಾ. ಇದೀಗ ಮಲಾಯಳಂನ ಲೂಸಿಫರ್ ಚಿತ್ರದ ರಿಮೇಕ್ ನಲ್ಲಿ ಈ ಜೋಡಿ ಒಂದಾಗಲಿದೆ ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಅಷ್ಟೇ ಅಲ್ಲದೇ ಸುಮಾರು ೧೫ ವರ್ಷಗಳ ಬಳಿಕ ಈ ಜೋಡಿ ಒಂದಾಗಿ ತೆರೆ ಹಂಚಿಕೊಳ್ಳುತ್ತಾರಾ ಎಂಬುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.
ಇನ್ನೂ ಚಿರುರವರ 153 ನೇ ಸಿನೆಮಾ ಆಗಿ ಲೂಸಿಫರ್ ತೆರೆಗೆ ಬರಲಿದ್ದು, ಈ ಚಿತ್ರವನ್ನು ಕಾಲಿವುಡ್ ಖ್ಯಾತ ನಿರ್ದೇಶಕ ಮೋಹನ್ ರಾಜ್ ನಿರ್ದೇಶನ ಮಾಡಲಿದ್ದಾರೆ. ಇನ್ನೂ ಇತ್ತೀಚಿಗಷ್ಟೆ ಆಚಾರ್ಯ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿದೆ. ಈ ಚಿತ್ರದ ಶೂಟಿಂಗ್ ಮುಗಿದ ಕೂಡಲೇ ಲೂಸಿಫರ್ ಸಿನೆಮಾ ಕೆಲಸಗಳಲ್ಲಿ ಚಿರು ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದ್ದು, ಈ ಚಿತ್ರದಲ್ಲಿ ತ್ರಿಷಾ ಇರುತ್ತಾರಾ ಅಥವಾ ಬೇರೆ ನಾಯಕಿಯ ಆಯ್ಕೆ ನಡೆಯುತ್ತಾ ಎಂಬುದು ಬಹಿರಂಗವಾಗಬೇಕಿದೆ.
