ಮುಂಬೈ: ಬಹುಭಾಷ ನಟಿ ಶ್ವೇತಾ ಬಸು ಪ್ರಸಾದ್ ಕೊತ್ತ ಬಂಗಾರು ಲೋಕಂ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಇದೀಗ ನಟಿ ಶ್ವೇತಾ ಚಿತ್ರವೊಂದರಲ್ಲಿ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಬಾಲಿವುಡ್ ನಿರ್ದೇಶಕ ಮಧುರ್ ಭಂಡಾರ್ಕರ್ ನಿರ್ದೇಶನದಲ್ಲಿ ಮೂಡಿಬರಲಿರುವ ಇಂಡಿಯಾ ಲಾಕ್ಡೌನ್ ಎಂಬ ಚಿತ್ರದಲ್ಲಿ ನಟಿ ಶ್ವೇತಾ ಬಸು ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಮೆಹ್ಸುನ್ನೀಸಾ ಪಾತ್ರಕ್ಕೆ ನಟಿ ಶ್ವೇತಾ ಬಸು ಪ್ರಾಣ ತುಂಬಲಿದ್ದಾರಂತೆ. ಇನ್ನೂ ಈ ಪಾತ್ರಕ್ಕಾಗಿಯೇ ನಿರ್ದೇಶಕರೊಂದಿಗೆ ಮುಂಬೈನಲ್ಲಿನ ಕಾಮಾಟಿಪುರಂ ಎಂಬ ಪ್ರದೇಶಕ್ಕೂ ಸಂಶೋಧನೆಗಾಗಿ ನಟಿ ಶ್ವೇತಾ ತೆರಳಿದ್ದರು ಎನ್ನಲಾಗಿದೆ.
ಇನ್ನೂ ಈ ಪಾತ್ರದ ಕುರಿತು ಪ್ರತಿಕ್ರಿಯೆ ನೀಡಿದ ಶ್ವೇತಾ ನಾನು ನಟಿಸುವಂತಹ ಪಾತ್ರಗಳಲ್ಲಿ ಆಳಕ್ಕಿಳಿಯಲು ಪ್ರಯತ್ನಿಸುತ್ತೇನೆ. ಜೊತೆಗೆ ನನ್ನ ಪಾತ್ರಗಳನ್ನು ನಿಜ ಎಂದು ನಂಬುತ್ತೇನೆ. ಇನ್ನೂ ಇಂಡಿಯಾ ಲಾಕ್ಡೌನ್ ಸಿನೆಮಾದಲ್ಲಿ ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇದಕ್ಕಾಗಿಯೇ ಮುಂಬೈನ ಕಾಮಾಟಿಪುರಗೆ ಭೇಟಿ ನೀಡಿದ್ದೇನೆ ಎಂದಿದ್ದಾರೆ.
ಕೊರೋನಾ ಲಾಕ್ಡೌನ್ ಹೇರಿದ ಕಾರಣ ಎಲ್ಲಾ ಕ್ಷೇತ್ರಕ್ಕೂ ಹೇಳತೀರದ ರೀತಿಯಲ್ಲಿ ಸಮಸ್ಯೆಯಾಗಿತ್ತು. ದೇಶದಲ್ಲಿ ಅನೇಕರನ್ನು ಬೀದಿ ಪಾಲು ಮಾಡಿತು ಕೊರೋನಾ. ಇದರ ಭಾಗವಾಗಿಯೇ ಲೈಂಗಿಕ ಕಾರ್ಯಕರ್ತೆಯರು ಸಹ ಸಾಕಷ್ಟು ಸಮಸ್ಯೆಗಳಿಗೆ ಸಿಲುಕಿದ್ದು, ಅವರು ಎದುರಿಸಿದ ಸಂಕಷ್ಟಗಳ ಕುರಿತು ಈ ಸಿನೆಮಾದಲ್ಲಿ ತೋರಿಸಲಾಗುತ್ತದೆ. ಜೊತೆಗೆ ಲೈಂಗಿಕ ಕಾರ್ಯಕರ್ತೆಯರು ಅನುಭವಿಸುವಂತಹ ಸಮಸ್ಯೆಗಳ ಕುರಿತು ಸಹ ಸಿನೆಮಾದ ಮೂಲಕ ಸಮಾಜಕ್ಕೆ ತಿಳಿಸುವ ಕೆಲಸ ಆಗಲಿದೆಯಂತೆ.
