ಹೈದರಾಬಾದ್: ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ ಕಾಜಲ್ ಅಗರ್ವಾಲ್ ಮದುವೆಯ ಬಳಿಕ ಶೂಟಿಂಗ್ ಸೆಟ್ ಗೆ ಆಗಮಿಸಿದ್ದು, ಆಚಾರ್ಯ ಚಿತ್ರದ ನಾಯಕ ಮೆಗಾಸ್ಟಾರ್ ಚಿರಂಜೀವಿ ಹೂ ಗುಚ್ಚ ನೀಡಿ ನವದಂಪತಿಯನ್ನು ಆಹ್ವಾನಿಸಿದ್ದಾರೆ.
ನಟಿ ಕಾಜಲ್ ಅಗರ್ವಾಲ್ ಕಳೆದ ಅಕ್ಟೋಬರ್ ತಿಂಗಳಲ್ಲಿ ಉದ್ಯಮಿ ಗೌತಮ್ ಕಿಚಲು ಜೊತೆ ಸರಳವಾಗಿ ಮದುವೆಯಾಗಿದ್ದರು. ಮಾಲ್ಡೀವ್ಸ್ ನಲ್ಲಿ ಹನಿಮೂನ್ ಸಹ ಮುಗಿಸಿದ್ದಾರೆ. ನಂತರ ತಮ್ಮ ಹೊಸ ಹೊಸ ಪೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ಟ್ರೆಂಡಿಗ್ ಸ್ಟಾರ್ಸ್ ಆಗಿದ್ದಾರೆ. ಕಾಜಲ್ ಪ್ರಸ್ತುತ ಆಚಾರ್ಯ ಚಿತ್ರದಲ್ಲಿ ತಮ್ಮ ಪಾತ್ರವನ್ನು ಪೋಷಿಸಲು ಆಗಮಿಸಿದ್ದಾರೆ. ಮೆಗಾಸ್ಟಾರ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಆಚಾರ್ಯ ಚಿತ್ರದಲ್ಲಿ ನಟಿ ಕಾಜಲ್ ನಾಯಕಿಯಾಗಿ ಅಭಿನಯಿಸಲಿದ್ದಾರೆ.
ಮದುವೆಯ ನಂತರ ಶೂಟಿಂಗ್ ಸೆಟ್ ಗೆ ಬಂದ ಕಾಜಲ್ ಅಗರ್ವಾಲ್ ಅವರಿಗೆ ಚಿತ್ರದ ನಾಯಕ ಚಿರಂಜೀವಿ ಹೂಗುಚ್ಛ ನೀಡಿ ಸ್ವಾಗತಿಸಿದ್ದಾರೆ. ದಂಪತಿ ಇಬ್ಬರಿಗೂ ಪ್ರೀತಿಯ ಸ್ವಾಗತ ದೊರೆತಿದೆ. ಇನ್ನೂ ಕೊರೋನಾದಿಂದ ಶೂಟಿಂಗ್ ಸ್ಥಗಿತಗೊಂಡಿದ್ದು, ಇದೀಗ ಪುನಃ ಶೂಟಿಂಗ್ ಪ್ರಾರಂಭವಾಗಿದ್ದು, ಇನ್ನೂ ಚಿರಂಜೀವಿ ಕಾಜಲ್ ಜೋಡಿ ಆಚಾರ್ಯ ಚಿತ್ರದಲ್ಲಿ ಎರಡನೇ ಬಾರಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ.
ಈ ಹಿಂದೆ ಚಿರಂಜೀವಿ ಹಾಗೂ ಕಾಜಲ್ ಕಾಂಬಿನೇಷನ್ ನಲ್ಲಿ ಕೈದಿ ನಂ.೧೫೦ ಚಿತ್ರದಲ್ಲಿ ವರ್ಕೌಟ್ ಆಗಿದ್ದು, ಇದೀಗ ೨ನೇ ಬಾರಿಗೆ ಆಚಾರ್ಯ ಮೂಲಕ ಪುನಃ ಒಂದಾಗಲಿದ್ದು, ತಮ್ಮ ಇಬ್ಬರೂ ಕಲಾವಿದರನ್ನು ತೆರೆಮೇಲೆ ಕಾಣಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
