ಬೆಂಗಳೂರು: ಕೆಜಿಎಫ್ ಚಿತ್ರದ ನಟ ರಾಕಿಂಗ್ ಸ್ಟಾರ್ ಯಶ್ ತಮ್ಮ ಅಭಿಮಾನಿಗಳಿಗಾಗಿ ಒಂದು ವೀಡಿಯೊ ಸಂದೇಶವನ್ನು ನೀಡಿದ್ದಾರೆ. ಅಂದ ಹಾಗೇ ಆ ವೀಡಿಯೊದಲ್ಲಿರುವುದು ತಮ್ಮ ಹುಟ್ಟು ಹಬ್ಬದ ಆಚರಣೆಗೆ ಸಂಬಂಧಿಸಿದ್ದು.
ಸ್ಯಾಂಡಲ್ವುಡ್ ಸ್ಟಾರ್ ನಟ ಯಶ್ ರವರ ಹುಟ್ಟುಹಬ್ಬ ಇದೇ ಜನವರಿ ೮ ರಂದು. ಈ ಹಿಂದೆ ಯಶ್ ರವರ ಹುಟ್ಟುಹಬ್ಬಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಅದ್ದೂರಿಯಾಗಿ ಆಚರಿಸುತ್ತಿದ್ದರು. ಕೊರೋನಾ ಕಾರಣ ತಮ್ಮ ಹುಟ್ಟುಹಬ್ಬದಂದು ತಮ್ಮ ಅಭಿಮಾನಿಗಳು ಯಾರು ಗುಂಪಾಗಿ ಸೇರಿ ಅದ್ದೂರಿಯಾಗಿ ಆಚರಣೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ತಾವು ಕೂಡ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ನನಗೆ ನಿಮ್ಮ ಕುಟುಂಬದ ಹಾಗೂ ನಿಮ್ಮ ಆರೋಗ್ಯ ಮುಖ್ಯವಾಗಿದ್ದು, ಯಾರೂ ಕೂಡ ಗುಂಪು ಕೂಡಿ ಆಚರಿಸಬೇಡಿ. ಸಾಮಾಜಿಕ ಜಾಲಾತಾಣಗಳ ಮೂಲಕ ಹುಟ್ಟುಹಬ್ಬದ ಸಂದೇಶ ಕಳುಹಿಸಿ ಸಾಕು. ಇನ್ನೂ ನನ್ನ ಹುಟ್ಟುಹಬ್ಬದ ದಿನದಂದು ಹೊಂಬಾಳೆ ಯೂಟ್ಯೂಬ್ ಚಾನೆಲ್ ನಲ್ಲಿ ಕೆಜಿಎಫ್-೨ ಚಿತ್ರದ ಟೀಸರ್ ರಿಲೀಸ್ ಆಗಲಿದ್ದು, ಟೀಸರ್ ನೋಡಿ ಆನಂದಿಸಿ. ಈ ಹಿಂದೆ ನಾನು ಹುಟ್ಟುಹಬ್ಬಕ್ಕೆ ಹೆಚ್ಚು ಮಹತ್ವ ನೀಡುತ್ತಿರಲಿಲ್ಲ.. ಇದೀಗ ನಿವೆಲ್ಲರೂ ಪ್ರೀತಿಯಿಂದ ನನ್ನ ಹುಟ್ಟುಹಬ್ಬವನ್ನು ಆಚರಿಸಲು ಬಂದ ಮೇಲೆಯಷ್ಟೆ ನಾನು ಇದಕ್ಕೆ ಮಹತ್ವ ನೀಡಲು ಆರಂಭಿಸಿದ್ದೇನೆ. ಆದರೆ ಕೊರೋನಾ ಕಾರಣ ನಿಮ್ಮೆಲ್ಲರನ್ನು ಹತ್ತಿರದಿಂದ ಕಾಣಲು ಸಾಧ್ಯವಿಲ್ಲ ಎಂದು ಬೇಸರ ಸಹ ವ್ಯಕ್ತಪಡಿಸಿದ್ದಾರೆ.
ಇನ್ನೂ ಹೊಂಬಾಳೆ ಫಿಲಂಸ್ ಕೆಜಿಎಫ್ ಟೈಮ್ಸ್ ಎಂಬ ವಿಶೇಷ ಸಂಚಿಕೆಯು ಕೆಜಿಎಫ್ ಚಿತ್ರಕ್ಕೆ ಸಂಬಂಧಿಸಿದಂತೆ ಪ್ರತಿದಿನ ಮುಖಪುಟವೊಂದನ್ನು ಹಂಚಿಕೊಳ್ಳುತ್ತಿದ್ದು, ಇಂದಿನ ಸಂಚಿಕೆಯಲ್ಲಿ ರಾಕಿಯ ನಡೆ ಯಾವುದರೆಡೆ? ಪ್ರೀತಿ ಮತ್ತು ಅಧಿಕಾರ? ಎಂಬ ಶೀರ್ಷಿಕೆಯಡಿ ಪ್ರಕಟವಾಗಿದೆ.
