ಮುಂಬೈ: ಮಾರಕ ವೈರಸ್ ಕೊರೋನಾ ಸೋಂಕು ಧಾಳಿಯಿಟ್ಟ ಸಂದರ್ಭದಲ್ಲಿ ಇಡೀ ವಿಶ್ವವೇ ಸ್ಥಭ್ದಗೊಂಡಿತ್ತು. ಈ ವೇಳೆ ಅನೇಕರು ಉದ್ಯೋಗ ಕಳೆದುಕೊಂಡಿದ್ದು, ಅಂತಹ ಅನೇಕರಿಗೆ ಇಂದು ರಿಯಲ್ ಹಿರೋ ಸೋನು ಸೂದ್ ಇ-ರಿಕ್ಷಾಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.
ಕೊರೋನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ವೈರಸ್ ನ್ನು ಹತೋಟಿಗೆ ತರುವ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಹೇರಿತ್ತು. ಈ ಸಂದರ್ಭದಲ್ಲಿ ಅನೇಕ ಕಾರ್ಮಿಕರು ಊಟ ವಸತಿ ಇಲ್ಲದೇ, ಕೆಲಸವಿಲ್ಲದೇ ತಮ್ಮ ಊರುಗಳಿಗೆ ಹೋಗಲು ಪರದಾಡುವಂತಾಗಿತ್ತು. ಈ ಸಂದರ್ಭದಲ್ಲಿ ನಟ ಸೋನು ಸೂದ್ ತಮ್ಮ ಮನೆಗಳಿಗೆ ತೆರಳಲು, ಹಸಿದವರಿಗೆ ಊಟ ನೀಡಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಮಸ್ಯೆಗಳನ್ನು ಪೋಸ್ಟ್ ಮಾಡಿದ ಅನೇಕರಿಗೆ ಶಿಕ್ಷಣಕ್ಕೆ, ವ್ಯವಸಾಯಕ್ಕೆ ಹೀಗೆ ಅನೇಕ ರೀತಿಯಲ್ಲಿ ನೆರವು ನೀಡಿದ್ದಾರೆ.
“ನೀನೆ ಸಂಪಾದಿಸು, ಮನೆ ನಡೆಸು” (ಕುದ್ ಕಮಾವ್, ಘರ್ ಚಲಾವ್) ಎಂಬ ಅಭಿಯಾನವನ್ನು ಸೋನು ಸೂದ್ ಪ್ರಾರಂಭಿಸಿದ್ದು, ಈ ಅಭಿಯಾನದ ಮೂಲಕ ಬ್ಯಾಟರಿ ಚಾಲಿತ ರಿಕ್ಷಾಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಇನ್ನೂ ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ದೊಡ್ಡ ಭವಿಷ್ಯತ್ತಿನ ನಡೆಗಾಗಿ ಈ ಸಣ್ಣ ಪ್ರಯತ್ನ ಎಂದು, ಸಣ್ಣ ಉದ್ದಿಮೆದಾರರನ್ನು ಪ್ರೋತ್ಸಾಹಿಸುವ ಸಣ್ಣ ಪ್ರಯತ್ನವಾಗಿ ಈ ಅಭಿಯಾನವನ್ನು ಆರಂಭ ಮಾಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಇನ್ನೂ ಜನರಿಗೆ ಸಹಾಯ ಮಾಡಲಿಕ್ಕೆ ಸೂದ್ ಮುಂಬೈನಲ್ಲಿರುವ ತಮ್ಮ ಎಂಟು ಆಸ್ತಿಗಳನ್ನು ಅಡವಿಟ್ಟು ೧೦ ಕೋಟಿ ಸಾಲ ಸಹ ಪಡೆದಿದ್ದಾರೆ. ಆದರೂ ಕೂಡ ಸೋನು ಸೂದ್ ಸಹಾಯ ಮಾಡುವುದನ್ನು ಮುಂದುವರೆಸಿದ್ದಾರೆ. ಈಗಾಗಲೇ ಅನೇಕ ಜನರು ನನ್ನ ಮೇಲೆ ಪ್ರೀತಿ ತೋರುತ್ತಿದ್ದಾರೆ. ಆ ಪ್ರೀತಿಯೇ ನನಗೆ ಪ್ರೇರಕ ಶಕ್ತಿಯಾಗಿದೆ. ಜನರನ್ನು ಹೆಚ್ಚು ಸ್ವಾವಲಂಭಿಗಳನ್ನಾಗಿ ಮಾಡುವ ಉದ್ದೇಶದಿಂದಲೇ ಈ ಇ-ರಿಕ್ಷಾ ವಿತರಣೆ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ ಎಂದಿದ್ದಾರೆ.
