Film News

ಹಿರಿಯ ನಟಿ ವಾಣಿಶ್ರೀ ಅವರ ಮಗ ನಿಧನ!

60-70ರ ದಶಕದ ದಕ್ಷಿಣ ಭಾರತದ ಪ್ರಸಿದ್ಧ ನಟಿ ವಾಣಿಶ್ರೀ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲೂ ಸಹ ‘ವೀರ ಸಂಕಲ್ಪ’, ‘ಮುರಿಯದ ಮನೆ’ , ‘ಮಿಸ್ ಲೀಲಾವತಿ’ ಸೇರಿದಂತೆ ಕೆಲವು ಸಿನಿಮಾದಲ್ಲಿ ನಟಿಸಿದ್ದಾರೆ. 80ರ ದಶಕದ ನಂತರ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು ನಟಿ ವಾಣಿಶ್ರೀ.

ಇವರ ಮಗ ಅಭಿನಯ್ ವೆಂಕಟೇಶ್ ಅವರು ಊಟಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೇ 24ರಂದು ಬೆಳಗಿನ ನಿದ್ದೆಯಲ್ಲಿರುವಾಗಲೇ ಅಭಿನಯ್ ವೆಂಕಟೇಶ್ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಅಭಿನಯ್ ಅವರ ಪಾರ್ಥಿವ ಶರೀರವನ್ನು ಚೆನ್ನೈ ನಲ್ಲಿರುವ ವಾಣಿಶ್ರೀ ಅವರ ನಿವಾಸಕ್ಕೆ ತರಲಾಗಿದ್ದು, ಭಾನುವಾರ ಅಂತ್ಯಕ್ರಿಯೆ ನೆರವೇರಲಿದೆ. ಅಭಿನಯ್ ಅವರಿಗೆ ಕೇವಲ 36 ವರ್ಷ ವಯಸ್ಸಾಗಿತ್ತು. ಮಗನನ್ನು ಕಳೆದುಕೊಂಡು ಬಹಳ ದುಃಖದಲ್ಲಿದ್ದಾರೆ ನಟಿ ವಾಣಿಶ್ರೀ. ಅಭಿನಯ ವೆಂಕಟೇಶ್ ಅವರ ನಿಧನಕ್ಕೆ ತೆಲುಗಿನ ಹಿರಿಯ ನಟ ಮೋಹನ್ ಬಾಬು ಸೇರಿದಂತೆ ಇನ್ನು ಕೆಲವು ನಟ ನಟಿಯರು ಸಂತಾಪ ಸೂಚಿಸಿದ್ದಾರೆ.

ಅಭಿನಯ್ ವೆಂಕಟೇಶ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಈ ನಷ್ಟವನ್ನು ಭರಿಸುವ ಶಕ್ತಿಯನ್ನು ದೇವರು ಕುಟುಂಬವರ್ಗದವರಿಗೆ ನೀಡಲಿ ಎಂದು ಪ್ರಾರ್ಥಿಸೋಣ.

Trending

To Top