gossip

ಶವ ಪೆಟ್ಟಿಗೆ ಹೊತ್ತು ನೃತ್ಯ ಮಾಡುತ್ತಿರುವ ಮೀಮ್ ವೀಡಿಯೊ ಹಿಂದಿನ ನಿಜವಾದ ಕಥೆ ಗೊತ್ತಾ?

ಬಿಳಿಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ಕೋಟ್ ಮತ್ತು ಟೊಪ್ಪಿ ಧರಿಸಿ ಹೆಗಲ ಮೇಲೆ ಶವಪೆಟ್ಟಿಗೆ ಹೊತ್ತುಕೊಂಡು ಸಂಗೀತಕ್ಕೆ ನರ್ತಿಸುವ ವಿಡಿಯೋ ನೀವೆಲ್ಲರೂ ನೋಡಿರಲೇಬೇಕು. ಈಗ ಒಂದೆರಡು ತಿಂಗಳಿಂದೀಚೆಗೆ ಈ ಸಂಗೀತ ಮತ್ತು ಡ್ಯಾನ್ಸ್ ಹೊಂದಿರುವ ನೂರಾರು ಮೀಮ್‌ಗಳು ಬಂದಿವೆ. ಬಹುತೇಕ ಎಲ್ಲ ಟ್ರೋಲ್ ಮತ್ತು ಮೀಮ್ ಪುಟಗಳಲ್ಲಿಯೂ ಈ ಮಜಾ ಡ್ಯಾನ್ಸ್ ನೋಡಿರುತ್ತೀರಿ.

ಟ್ವಿಟ್ಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟಿಕ್ ಟಾಕ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಅಂತ್ಯಸಂಸ್ಕಾರದ ಶವಪೆಟ್ಟಿಗೆ ನೃತ್ಯ ಬಹಳ ಸದ್ದು ಮಾಡುತ್ತಿದೆ. ಕೊರೊನಾ ವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಈ ನೃತ್ಯ ಮೀಮ್‌ಗಳಿಗೆ ಆಹಾರ ಒದಗಿಸುತ್ತಿದೆ. ಜನರು ಮುಗ್ಗರಿಸಿ ಬೀಳುವುದು, ಅಪಘಾತಗಳು ಮುಂತಾದ ಹಳೆಯ ವಿಡಿಯೋಗಳಿಗೆ ‘ಶವಪೆಟ್ಟಿಗೆಯ ನೃತ್ಯ’ ಜೋಡಣೆಯಾಗುತ್ತಿದೆ.

ಈ ವಿಡಿಯೋದ ಮೂಲ ಪಶ್ಚಿಮ ಆಫ್ರಿಕಾದ ಘಾನಾ ದೇಶ. ಇಲ್ಲಿ ಸಾವನ್ನು ಮತ್ತು ಮೃತರ ಮತ್ತೊಂದು ಜಗತ್ತಿನ ಪಯಣವನ್ನು (ಮರುಜನ್ಮ) ಸಂಭ್ರಮಿಸುವ ಸಂಪ್ರದಾಯ ಇತಿಹಾಸದಲ್ಲಿದೆ. 2015ರಲ್ಲಿ ಟ್ರಾವೆಲಿನ್ ಸಿಸ್ಟರ್ ಎಂಬ ಯೂಟ್ಯೂಬರ್ ಘಾನಾದಲ್ಲಿನ ತನ್ನ ಅತ್ತೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದಳು. ಅಲ್ಲಿ ಆಕೆ ಈ ಅಚ್ಚರಿದಾಯಕ ನೃತ್ಯ ಪ್ರದರ್ಶನ ಕಂಡಿದ್ದಳು.

ವೃತ್ತಿಪರ ನೃತ್ಯಪಟುಗಳು ಅಜ್ಜಿಯ ‘ಮರಳಿ ಮಣ್ಣಿಗೆ’ ಸಮಯದಲ್ಲಿ ಅವರಿಗೆ ಹೆಮ್ಮೆಯಿಂದ ಗೌರವ ಸಲ್ಲಿಸುತ್ತಿದ್ದರು. ಅವರ ದೇಹದ ಚಲನೆಗಳು, ಸಂಗೀತಕ್ಕೆ ತಕ್ಕಂತ ಹೆಜ್ಜೆಗಳು, ಮೃತದೇಹ ಹೊತ್ತಿದ್ದರೂ ಲೀಲಾಜಾಲವಾಗಿ ನರ್ತಿಸುವ ಶಕ್ತಿ ಅವರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿತ್ತು.

ಶವಪೆಟ್ಟಿಗೆಗೆ ಹೆಗಲು ಕೊಟ್ಟು ನರ್ತಿಸುವ ಈ ಪ್ರತಿಭೆಗಳು ಬೆಳಕಿಗೆ ಬಂದಿದ್ದು 2017ರಲ್ಲಿ. ಬಿಬಿಸಿ ನ್ಯೂಸ್ ಆಫ್ರಿಕಾ ಅವರ ಕುರಿತು ಒಂದು ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿತ್ತು. ತಮ್ಮ ಪ್ರೀತಿಪಾತ್ರರು ಮರಣ ಹೊಂದಿದಾಗ ಘಾನಾದ ಕುಟುಂಬಗಳು ಈ ಶವಪೆಟ್ಟಿಗೆ ಹೊರುವವರನ್ನು ಕರೆಸುತ್ತಾರೆ. ಮೃತರನ್ನು ಸಂತೋಷದಿಂದ ಕಳುಹಿಸಬೇಕೆಂಬ ನಂಬಿಕೆ ಅವರದು. ನಾಲ್ಕರಿಂದ ಆರು ಜನರ ತಂಡ ಅದ್ಭುತ ನೃತ್ಯದ ಮೂಲಕ ಗಮನ ಸೆಳೆಯುತ್ತದೆ.

ಆದರೆ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಸಂಗೀತ ಘಾನಾದ್ದಲ್ಲ. ಇದು 2010ರಲ್ಲಿ ಟೋನಿ ಇಜಿ ಮತ್ತು ವೈಸ್‌ಟೋನ್ ಎಂಬುವವರು ನಿರ್ಮಿಸಿದ ‘ಆಸ್ಟ್ರೋನೋಮಿಯಾ’ ಎಲೆಕ್ಟ್ರಿಕ್ ಡ್ಯಾನ್ಸ್ ಮ್ಯೂಸಿಕ್ (ಇಡಿಎಂ). ಆ ಸಂಗೀತವನ್ನು ‘ಶವಪೆಟ್ಟಿಗೆ ನೃತ್ಯ’ದ ಲಯಕ್ಕೆ ತಕ್ಕಂತೆ ಹೊಂದಿಸಲಾಗಿತ್ತು. ಅದೀಗ ಮೀಮ್ಸ್‌ಗಳ ಮೆಚ್ಚಿನ ವಿಡಿಯೋ ಆಗಿದೆ.

ಈಗಿನ ಮೀಮ್‌ಗಳ ಟ್ರೆಂಡ್ 2020ರ ಫೆಬ್ರವರಿಯಿಂದೀಚೆಗಷ್ಟೇ ಶುರುವಾಗಿದ್ದು. ಟಿಕ್ ಟಾಕ್ ಬಳಕೆದಾರನೊಬ್ಬ ಎತ್ತರದಿಂದ ಜಿಗಿಯುವ ತನ್ನ ಸ್ಟಂಟ್‌ ಪ್ರಯತ್ನದಲ್ಲಿ ವಿಫಲವಾಗುವುದನ್ನು ಘಾನಾದ ಶವಪೆಟ್ಟಿಗೆಯ ನೃತ್ಯದ ವಿಡಿಯೋ ಕ್ಲಿಪ್ ಜತೆಗೆ ಜೋಡಿಸಿ ಶೇರ್ ಮಾಡಿದ್ದ. ಅಲ್ಲಿಂದ ಇದು ಜನಪ್ರಿಯವಾಯಿತು. ಮೀಮ್ ಪುಟಗಳು ಇದನ್ನು ಬಳಸಿಕೊಳ್ಳತೊಡಗಿದವು.

ನಾವು ಟ್ರೋಲ್ ಪುಟಗಳು ಸೃಷ್ಟಿಸುವ ಮೀಮ್‌ಗಳನ್ನು ಕಂಡು ನಗುತ್ತೇವೆ. ನಮ್ಮೊಳಗೆ ಈ ನೃತ್ಯ ನಗು ಮೂಡಿಸುತ್ತದೆ. ಅದರ ಹಿಂದಿನ ಪರಂಪರೆಯ ಮಾಹಿತಿ ಇಲ್ಲದಿದ್ದಾಗ ಈ ನೃತ್ಯವೂ ಅಣಕಕ್ಕೆ ಒಳಗಾಗುತ್ತದೆ. ಇದೇನು ಸಂಸ್ಕೃತಿ ಎಂದು ಲೇವಡಿ ಮಾಡುತ್ತಾರೆ. ಈ ‘ಅಸಂಪ್ರದಾಯಿಕ’ ಅಂತ್ಯಸಂಸ್ಕಾರ ಪದ್ಧತಿ ಜನರ ನಗುವಿನ ಮದ್ದಾಗುತ್ತಿದೆ. ಆದರೆ ಇದು ಮೃತಪಟ್ಟವರನ್ನು ಖುಷಿಯಿಂದ ಕಳುಹಿಸುವ ಸಂಪ್ರದಾಯ ಎನ್ನುವುದನ್ನು ಮರೆಯಬಾರದು.

Trending

To Top