Cinema

ರಾಜಮೌಳಿಯ ‘ಆರ್‌ಆರ್‌ಆರ್‌’ ಸಿನಿಮಾದಲ್ಲಿ ‘ಕಿಚ್ಚ’ ಸುದೀಪ್‌ ನಟನೆ?

‘ಕಿಚ್ಚ’ ಸುದೀಪ್‌ ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ಮಿಂಚುತ್ತಿದ್ದಾರೆ. ಈಚೆಗಷ್ಟೇ ಅವರು ತೆಲುಗಿನಲ್ಲಿ ‘ಮೆಗಾ ಸ್ಟಾರ್’ ಚಿರಂಜೀವಿ ಜೊತೆ ನಟಿಸಿದ್ದ ‘ಸೈ ರಾ ನರಸಿಂಹ ರೆಡ್ಡಿ’ ಹಾಗೂ ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಿದ್ದ ‘ದಬಾಂಗ್ 3’ ಚಿತ್ರಗಳು ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದವು. ಹಾಗಾಗಿ, ಪರಭಾಷೆಯಿಂದ ಅವರಿಗೆ ಸಾಕಷ್ಟು ಆಫರ್‌ಗಳು ಬರುತ್ತಲೇ ಇವೆ. ಸದ್ಯ ಟಾಲಿವುಡ್‌ ಅಂಗಳದಲ್ಲಿ ಹಬ್ಬಿರುವ ಸುದ್ದಿಯೊಂದು ‘ಕಿಚ್ಚ’ನ ಅಭಿಮಾನಿಗಳು ದಿಲ್‌ಖುಷ್ ಮಾಡಿದೆ. ಅಷ್ಟಕ್ಕೂ ಆ ಸುದ್ದಿ ಏನು? ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಸುದೀಪ್ ನಟಿಸುವ ಸಾಧ್ಯತೆ ಇದೆಯಂತೆ!

ಸದ್ಯ ರಾಜಮೌಳಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಆರ್‌ಆರ್‌ಆರ್‌’ಗೆ ಭರದಿಂದ ಶೂಟಿಂಗ್ ನಡೆಯುತ್ತಿದೆ. ರಾಮ್‌ ಚರಣ್‌ ಮತ್ತು ಜೂ. ಎನ್‌ಟಿಆರ್ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದು, ಈ ಚಿತ್ರದಲ್ಲಿ ‘ಕಿಚ್ಚ’ ಸುದೀಪ್‌ ಅವರಿಗೂ ಮಹತ್ವದ ಪಾತ್ರ ಇರಲಿದೆಯಂತೆ!

ಖಾಕಿ ತೊಟ್ಟು ಮಿಂಚಲಿದ್ದಾರಾ ಕಿಚ್ಚ ?

ಮೂಲಗಳ ಪ್ರಕಾರ, ‘ಆರ್‌ಆರ್‌ಆರ್‌’ನಲ್ಲಿ ಬರುವ ಪ್ರಮುಖ ಪೊಲೀಸ್ ಅಧಿಕಾರಿ ಪಾತ್ರವೊಂದಕ್ಕೆ ಕಿಚ್ಚ ಬಣ್ಣ ಹಚ್ಚುವ ಸಾಧ್ಯತೆಗಳಿವೆಯಂತೆ. ಸಿನಿಮಾದಲ್ಲಿ ಇದು ಬಹಳ ಮುಖ್ಯ ಪಾತ್ರವಾಗಿರುವುದರಿಂದ, ಸುದೀಪ್ ಅವರಿಂದಲೇ ಮಾಡಿಸಬೇಕು ಎಂಬುದು ಚಿತ್ರತಂಡ ಅಭಿಲಾಷೆಯಂತೆ.

​ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ!

ಈ ಸುದ್ದಿ ಟಾಲಿವುಡ್‌ ಅಂಗಳದಲ್ಲಿ ಬಿರುಸಿನಿಂದ ಓಡಾಡುತ್ತಿದೆ. ಆದರೆ, ಈ ಬಗ್ಗೆ ಯಾರೊಬ್ಬರು ಅಧಿಕೃತ ಮಾಹಿತಿ ನೀಡಿಲ್ಲ. ಅಲ್ಲದೆ, ಸುದೀಪ್‌ ಈಗ ಸಿಕ್ಕಾಪಟ್ಟೆ ಬ್ಯುಸಿ ಇದ್ಧಾರೆ. ಇತ್ತೀಚೆಗಷ್ಟೇ ಅವರ ‘ಕೋಟಿಗೊಬ್ಬ 3’ ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್ ಆಗಿದ್ದು, ಟ್ರೆಂಡಿಂಗ್‌ನಲ್ಲಿದೆ.

Trending

To Top