ಬೆಂಗಳೂರನ್ನು ಮಿಸ್ ಮಾಡ್ತಿದ್ದಾರಂತೆ ಬಹುಭಾಷಾ ನಟಿ , ಕನ್ನಡತಿ ಪ್ರಿಯಾಮಣಿ

ಬಹುಭಾಷಾ ನಟಿ ಪ್ರಿಯಾಮಣಿ ಮದುವೆಯ ನಂತರವೂ ತುಂಬಾ ಬ್ಯುಸಿ ಇರುವ ನಟಿ. ಮದುವೆಯಾದರೆ ನಾಯಕಿಯಾಗಿ ಮುಂದುವರಿಯುವ ಅವಕಾಶಗಳೇ ಕ್ಷೀಣಿಸುತ್ತವೆ ಎಂದು ಮದುವೆ ಆಲೋಚನೆಯನ್ನೇ ಮುಂದೂಡುವ ನಟಿಯರ ನಡುವೆ ಪ್ರಿಯಾಮಣಿ ಭಿನ್ನವಾಗಿ ಕಾಣಿಸುತ್ತಾರೆ. ‘ನನ್ನ ಕೈಯಲ್ಲಿರುವ ಅವಕಾಶಗಳನ್ನು ನೋಡಿದರೆ ಮದುವೆ ಪೂರ್ವ ಮತ್ತು ಮದುವೆ ನಂತರ ಅಂತಹ ವ್ಯತ್ಯಾಸಗಳೇನು ಆಗಿಲ್ಲ’ ಎನ್ನುತಾರೆ ಪ್ರಿಯಾಮಣಿ.

ಮದುವೆಯಾದ ನಂತರ ಮುಂಬೈನಲ್ಲಿ ನೆಲೆಸಿರುವ ಪ್ರಿಯಾಮಣಿ, ಸದ್ಯ ತೆಲುಗಿನ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿಗೆ ರಿಮೇಕ್‌ ಆಗುತ್ತಿರುವ ತಮಿಳಿನ ಹಿಟ್‌ ಸಿನಿಮಾ ‘ಅಸುರನ್‌’ನಲ್ಲಿ ವೆಂಕಟೇಶ್‌ಗೆ ಪ್ರಿಯಾಮಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಣಾ ದಗ್ಗು ಭಾಟಿಯಾ ನಾಯಕನಾಗಿರುವ ಮತ್ತೊಂದು ಬಹುನಿರೀಕ್ಷಿತ ತೆಲುಗು ಚಿತ್ರದಲ್ಲೂ ಪ್ರಿಯಾಮಣಿ ಅಭಿನಯಿಸುತ್ತಿದ್ದಾರೆ. ಇದಲ್ಲದೆ, ಇನ್ನು ಹಲವು ಹೊಸ ಪ್ರಾಜೆಕ್ಟ್‌ಗಳು ಅವರ ಕೈಯಲ್ಲಿವೆಯಂತೆ.

ಪ್ರಿಯಾಮಣಿ ನಾಯಕಿಯಾಗಿ ನಟಿಸಿರುವ ಕನ್ನಡದ ‘ಡಾಕ್ಟರ್‌ 56’ ಚಿತ್ರವು ಪೂರ್ಣಗೊಂಡಿದೆ. ಇದು ತಮಿಳಿನಲ್ಲೂ ತೆರೆಕಾಣಲಿದೆ. ಡಬ್ಬಿಂಗ್‌ ಕೆಲಸವೂ ಮುಗಿದಿದ್ದು, ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಕುಟುಂಬದತ್ತ ಮಾತು ಹೊರಳಿದಾಗ, ‘ಬೆಂಗಳೂರು ನನ್ನ ತವರು ಮನೆ. ನನಗೆ ಪ್ರಿಯವಾದ ಬೆಂಗಳೂರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಅಮ್ಮ, ಅಮ್ಮ ಇಬ್ಬರೂ ಬೆಂಗಳೂರಿನಲ್ಲೇ ಇದ್ದಾರೆ. ಬೆಂಗಳೂರಿಗೆ ಬಂದು ಮೂರುನಾಲ್ಕು ತಿಂಗಳೇ ಆಗಿ ಹೋಯಿತು. ಲಾಕ್‌ಡೌನ್‌ ಸ್ವಲ್ಪ ತೆರವಾಗಿ ಏರ್‌ಲೈನ್ಸ್‌ ಆರಂಭವಾದರೂ ಸಾಕು, ಬೆಂಗಳೂರಿಗೆ ಹಾರಿ ಬರೋಣ ಎನಿಸುತ್ತಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈಗ ಎಲ್ಲಿದ್ದೀವೋ ಅಲ್ಲಲ್ಲೇ ಇರುವುದು ಸುರಕ್ಷಿತ. ಅನಗತ್ಯ ಪ್ರಯಾಣ ಸಮಸ್ಯೆಗೆ ಕಾರಣವಾಗುತ್ತದೆ’ ಎಂದಿದ್ದಾರೆ.

Previous articleತಮಿಳು ನಟ ಸೂರ್ಯ ಅವರ ಸಿನಿಮಾಗಳನ್ನು ಬ್ಯಾನ್ ಮಾಡುವಂತೆ ಎಚ್ಚರಿಕೆ!
Next articleಕೊರೊನಾದಿಂದ ಕಂಗಾಲಾಗಿರುವ ಭಾರತೀಯರಿಗೆ ಒಂದು ಸಿಹಿ ಸುದ್ದಿ