Kannada Reality Shows

ಬಿಗ್ ಬಾಸ್ ಕನ್ನಡ ಸೀಸನ್ 7 ಫಿನಾಲೆ ವಿಶೇಷತೆಗಳೇನು?

‘ಬಿಗ್ ಬಾಸ್ ಕನ್ನಡ ಸೀಸನ್ 7’ರ ಗ್ರ್ಯಾಂಡ್‌ ಫಿನಾಲೆ ಎಪಿಸೋಡ್‌ ನಾಳೆಯಿಂದ ಪ್ರಸಾರವಾಗಲಿದೆ. ಬಿಗ್ ಬಾಸ್ ವಿನ್ನರ್ ಯಾರಾಗಲಿದ್ದಾರೆ ಎಂಬ ಕುತೂಹಲ ಹಲವರಿಗಿದೆ. ಜೊತೆಯಲ್ಲಿ ಗ್ರ್ಯಾಂಡ್ ಫಿನಾಲೆಯಲ್ಲಿ ಏನೆಲ್ಲ ವಿಶೇಷತೆ ಇರಲಿದೆ? ಎಂಬ ಕುತೂಹಲ ನಿಮಗೂ ಇರಬಹುದು. ಪ್ರತಿ ಬಾರಿಯ ಗ್ರ್ಯಾಂಡ್‌ ಫಿನಾಲೆಯಲ್ಲಿ ಸಾಕಷ್ಟು ವಿಶೇಷತೆ ಇದ್ದೇ ಇರುತ್ತದೆ. ಹಾಗಾದರೆ ಈ ಬಾರಿ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಏನೆಲ್ಲ ವಿಶೇಷತೆ ಇರಲಿದೆ?

ಚಂದನಾ ಅನಂತಕೃಷ್ಣ, ಚೈತ್ರಾ ಕೋಟೂರ್, ಚೈತ್ರಾ ವಾಸುದೇವನ್, ದುನಿಯಾ ರಶ್ಮಿ ಇತರರು ಬಿಗ್ ಬಾಸ್ ವೇದಿಕೆಯಲ್ಲಿ ಡಾನ್ಸ್ ಮಾಡಲಿದ್ದಾರೆ. ಈ ಡಾನ್ಸ್‌ಗಾಗಿ ಅವರು ಹಲವಾರು ದಿನಗಳಿಂದ ರಿಹರ್ಸಲ್ ಮಾಡುತ್ತಿದ್ದಾರೆ. ಚಂದನಾ ಒಳ್ಳೆಯ ನೃತ್ಯಗಾರ್ತಿ ಎಂಬುದು ಬಿಗ್ ಬಾಸ್ ಮನೆಯಲ್ಲಿ ಬಹಿರಂಗವಾಗಿದೆ. ಚೈತ್ರಾ ವಾಸುದೇವನ್ ಮತ್ತು ಚೈತ್ರಾ ಕೋಟೂರ್ ಅವರ ಡಾನ್ಸ್ ಹೇಗಿರುತ್ತದೆ ಎಂಬ ಕೌತುಕ ಪ್ರೇಕ್ಷಕರದ್ದು. ದುನಿಯಾ ರಶ್ಮಿ ಕೂಡ ಹೆಜ್ಜೆ ಹಾಕಲಿದ್ದಾರೆ. ಅದರ ಜೊತೆಗೆ ಈ ಸೀಸನ್‌ನ ಉಳಿದ ಸ್ಪರ್ಧಿಗಳ ಕಾರ್ಯಕ್ರಮ ಕೂಡ ಇರಲಿದೆಯಂತೆ.

ಈ ಹಿಂದಿನ ಸೀಸನ್‌ನ ಸ್ಪರ್ಧಿಗಳಾದ ಅನುಪಮಾ ಗೌಡ, ಕೃಷಿ ತಾಪಂಡ ಕೂಡ ಬಿಗ್ ಬಾಸ್ ವೇದಿಕೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಇವರು ರಿಹರ್ಸಲ್ ಮಾಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅನುಪಮಾ ಒಳ್ಳೆಯ ನೃತ್ಯಗಾರ್ತಿ ಎಂಬುದಕ್ಕೆ ಅವರು ಈ ಹಿಂದೆ ಅವರು ಸೀರಿಯಲ್ ಸಂತೆಗಳಲ್ಲಿ, ಅನುಬಂಧ ಅವಾರ್ಡ್ಸ್‌ನಲ್ಲಿ ಮಾಡಿದ ಡಾನ್ಸ್ ಸಾಕ್ಷಿ. ಆದರೆ ಇವರು ಯಾವೆಲ್ಲ ಹಾಡುಗಳಿಗೆ ಡಾನ್ಸ್ ಮಾಡಲಿದ್ದಾರೆ? ಡಾನ್ಸ್ ವಿಶೇಷತೆ ಏನು? ಎಂಬುದರ ಬಗ್ಗೆ ಮಾಹಿತಿ ಇಲ್ಲ.

ಈ ಸೀಸನ್‌ನ ಎಲ್ಲ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬರಲಿದ್ದಾರೆ. ಅದರ ಜೊತೆಗೆ ಈ ಹಿಂದಿನ ಸೀಸನ್‌ನ ಸ್ಪರ್ಧಿಗಳು ಕೂಡ ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆಗೆ ಬರುವ ಸಾಧ್ಯತೆ ಇದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಕಂಡ ಕಾಮಿಡಿ, ಅಳು, ಎಮೋಷನ್ಸ್, ಆಟ, ಜಗಳ, ನೃತ್ಯ, ವಿಶೇಷ ಕಾರ್ಯಕ್ರಮ, ಕಿಚ್ಚನ ಬುದ್ಧಿವಾದ ಮುಂತಾದವುಗಳ ಬಗ್ಗೆ ವಿಡಿಯೋ ಮಾಡಿ ತೋರಿಸುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ ಕಿಚ್ಚನ ನಿರೂಪಣೆ ಬಗ್ಗೆ ಒಂದು ವಿಡಿಯೋ ಪ್ಲೇ ಮಾಡಬಹುದು.

Trending

To Top