Film News

ಬಾಲಿವುಡ್ ನಟಿ ಕಾಜೋಲ್ ಅವರ ಕ್ರಶ್ ಬಗೆಗಿನ ಒಂದು ಇಂಟರೆಸ್ಟಿಂಗ್ ಸ್ಟೋರಿ …

ನಟಿ ಕಾಜೋಲ್‌ ಅವರಿಗೂ ಒಬ್ಬ ಸ್ಟಾರ್‌ ನಟನ ಮೇಲೆ ಕ್ರಶ್‌ ಆಗಿತ್ತು! ಈ ವಿಚಾರವನ್ನು ಖ್ಯಾತ ನಿರ್ದೇಶಕ/ನಿರ್ಮಾಪಕ ಕರಣ್‌ ಜೋಹರ್‌ ಬಹಿರಂಗ ಪಡಿಸಿದ್ದಾರೆ. ಕಪಿಲ್ ಶರ್ಮಾ ಅವರ ಟಾಕ್ ಶೋ ಕಾರ್ಯಕ್ರಮದಲ್ಲಿ ಕಾಜೋಲ್‌ ಮತ್ತು ಕರಣ್‌ ಜೋಹರ್‌ ಭಾಗವಹಿಸಿದ್ದರು. ಈ ವೇಳೆ ಹಲವು ಸಂಗತಿಗಳು ಹೊರಬಂದಿವೆ. ಇವರಿಬ್ಬರ ಸ್ನೇಹದ ಹಿಂದಿನ ಕೆಲವು ತಮಾಷೆ ಪ್ರಸಂಗಗಳನ್ನೂ ಹೇಳಿಕೊಂಡಿದ್ದಾರೆ.

ಈಗ ಅಜಯ್‌ ದೇವಗನ್‌ ಜೊತೆ ಕಾಜೋಲ್‌ ಸುಖಸಂಸಾರ ನಡೆಸುತ್ತಿದ್ದಾರೆ. ಅವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ಅಜಯ್‌ ದೇವಗನ್‌ ಅವರನ್ನು ಕೈ ಹಿಡಿಯುವುದಕ್ಕೂ ಮುನ್ನ ನಟ ಅಕ್ಷಯ್‌ ಕುಮಾರ್‌ ಮೇಲೆ ಕಾಜೋಲ್‌ಗೆ ಕ್ರಶ್‌ ಆಗಿತ್ತಂತೆ. ಅವರನ್ನು ನೋಡಲು ಕಾಜೋಲ್‌ ಸದಾ ಹಪಹಪಿಸುತ್ತಿದ್ದರು. ಅದು 1991ರ ಸಮಯ. ಅಕ್ಷಯ್‌, ಕಾಜೋಲ್‌ ಚಿತ್ರರಂಗಕ್ಕೆ ಆಗತಾನೇ ಕಾಲಿಟ್ಟಿದ್ದರು. ರಿಷಿ ಕಪೂರ್‌ ನಟನೆಯ ‘ಹೆನ್ನಾ’ ಸಿನಿಮಾದ ಪ್ರೀಮಿಯರ್‌ ಶೋಗೆ ಅಕ್ಷಯ್‌ ಕುಮಾರ್‌ ಬರುತ್ತಾರೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಕಾಜೋಲ್‌ ಕೂಡ ಅಲ್ಲಿಗೆ ತೆರಳಲು ಸಿದ್ಧರಾದರು. ಅವರಿಗೆ ಸಾಥ್‌ ನೀಡಿದ್ದು ಗೆಳೆಯ ಕರಣ್‌ ಜೋಹರ್‌. ಅಲ್ಲೊಂದು ಇಂಟರೆಸ್ಟಿಂಗ್‌ ಘಟನೆ ಕೂಡ ನಡೆಯಿತು.

ಅಕ್ಷಯ್‌ ಕುಮಾರ್‌ ಅವರನ್ನು ನೋಡಬೇಕು ಎಂಬುದು ಕಾಜೋಲ್‌ ಮನದಲ್ಲಿದ್ದ ಬಯಕೆ ಆಗಿತ್ತು. ಅದಕ್ಕಾಗಿ ‘ಹೆನ್ನಾ’ ಸಿನಿಮಾದ ಪ್ರೀಮಿಯರ್‌ ಶೋಗೆ ಕಾಜೋಲ್‌ ಕೂಡ ತೆರಳಿದ್ದರು. ಆದರೆ ಅಲ್ಲಿ ಅಕ್ಷಯ್‌ ಕುಮಾರ್ ಕಾಣಲೇ ಇಲ್ಲ. ಕಾಜೋಲ್‌ ಮತ್ತು ಕರಣ್‌ ಇಬ್ಬರೂ ಸೇರಿಕೊಂಡು ತುಂಬ ಸಮಯ ಹುಡುಕಿದರೂ ಅಕ್ಷಯ್‌ ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಇಬ್ಬರಿಗೂ ಸಾಧ್ಯವಾಗಲಿಲ್ಲ. ಕಡೆಗೂ ನಿರಾಸೆ ಮಾಡಿಕೊಂಡ ಕಾಜೋಲ್‌ ಮನೆಗೆ ವಾಪಸ್‌ ಬರಬೇಕಾಯಿತು. ಹೀಗೆ ಆ ಸಂದರ್ಭದಲ್ಲಿ ಕಾಜೋಲ್‌ಗೆ ಎಷ್ಟರಮಟ್ಟಿಗೆ ಕ್ರಶ್‌ ಆಗಿತ್ತು ಎಂಬುದನ್ನು ಕರಣ್‌ ವಿವರಿಸಿದ್ದಾರೆ. ನಂತರ ಬಾಲಿವುಡ್‌ನಲ್ಲಿ ಕಾಜೋಲ್‌, ಅಕ್ಷಯ್‌ ಇಬ್ಬರೂ ಸ್ಟಾರ್‌ ಕಲಾವಿದರಾಗಿ ಮಿಂಚಿದರು. 1999ರಲ್ಲಿ ನಟ ಅಜಯ್‌ ದೇವಗನ್‌ ಜೊತೆ ಕಾಜೋಲ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಕರಣ್‌-ಕಾಜೋಲ್‌ ಸ್ನೇಹ ಶುರುವಾಗಿದ್ದರ ಹಿಂದೆಯೂ ಒಂದು ಫನ್ನಿ ಘಟನೆ ಇದೆ. ಇಬ್ಬರೂ ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದವರು. ಪಾರ್ಟಿಯೊಂದರಲ್ಲಿ ಮೊದಲ ಬಾರಿಗೆ ಭೇಟಿ ಆದಾಗ ಕಾಜೋಲ್‌ಗೆ 15 ವರ್ಷ. ಕರಣ್‌ಗೆ 17ರ ಪ್ರಾಯ. ಆ ಪಾರ್ಟಿಗೆ ಕರಣ್‌ ಸ್ವಲ್ಪ ವಿಚಿತ್ರವಾಗಿ ಡ್ರೆಸ್‌ ಮಾಡಿಕೊಂಡು ಬಂದಿದ್ದರಂತೆ. ಅದನ್ನು ನೋಡಿದ ಕಾಜೋಲ್‌ಗೆ ನಗು ತಡೆಯಲು ಸಾಧ್ಯವಾಗಲಿಲ್ಲ. ಸತತ ಅರ್ಧ ಗಂಟೆ ಕಾಲ ಅವರು ನಗುತ್ತಲೇ ಇದ್ದರು. ಅದರಿಂದ ಕರಣ್‌ಗೆ ಕಿರಿಕಿರಿ ಆಯಿತು. ಕೋಪ ಮಾಡಿಕೊಂಡು ಪಾರ್ಟಿಯಿಂದ ಅರ್ಧಕ್ಕೆ ಹೊರನಡೆದರು. ‘ಅದು ನನ್ನ ಜೀವನದಲ್ಲಿ ಆದ ದೊಡ್ಡ ಅವಮಾನ’ ಎಂದು ನೆನಪಿಸಿಕೊಂಡಿದ್ದಾರೆ ಕರಣ್‌.

Trending

To Top