ಜನ್ಮ ಕೊಟ್ಟಿದ್ದು ಆಂಧ್ರ..ಆದರೆ ಜೀವನ ಕೊಟ್ಟಿದ್ದು ಕರ್ನಾಟಕ. ಯಾವುದೇ ಮುಜುಗರವಿಲ್ಲದೆ ಈ ಡೈಲಾಗ್ ಅನ್ನು ಹಲವು ಬಾರಿ ದೊಡ್ಡ ದೊಡ್ಡ ವೇದಿಕೆಗಳಲ್ಲಿ ನಟ ರವಿಶಂಕರ್ ಹೇಳಿದ್ದಾರೆ. ಇದಕ್ಕೆ ಕಾರಣ ಒಂದು ಕಾಲದಲ್ಲಿ ಡಬ್ಬಿಂಗ್ ಕಲಾವಿದನಾಗಿದ್ದ ರವಿಶಂಕರ್ರನ್ನು ಕನ್ನಡಿಗರು ನಟನಾಗಿ ಸ್ವೀಕರಿಸಿದ್ದು.
ಸದ್ಯ ರವಿಶಂಕರ್ ಕನ್ನಡದ ಫುಲ್ ಬೇಡಿಕೆಯ ಖಳನಟ. ಅಷ್ಟೇ ಅಲ್ಲದೆ ಪೋಷಕ ನಟ ಮತ್ತು ಹಾಸ್ಯನಟನಾಗಿಯೂ ಮಿಂಚುತ್ತಿದ್ದಾರೆ. ಇತ್ತ ಸ್ಯಾಂಡಲ್ವುಡ್ ಅಲ್ಲದೆ ಅತ್ತ ಟಾಲಿವುಡ್, ಕಾಲಿವುಡ್ನಲ್ಲೂ ಕನ್ನಡದ ಆರ್ಮುಗಂ ಖಡಕ್ ಖದರ್ ತೋರಿಸುತ್ತಿದ್ದಾರೆ.
ಇದರ ನಡುವೆ ಇತ್ತೀಚೆಗೆ ತೆಲುಗಿನ ಟಿವಿ ಚಾನೆಲ್ನಲ್ಲಿ ಪ್ರಸಾರವಾಗುವ ಅಲಿತೊ ಸರದಾಗ ಎಂಬ ಸಂದರ್ಶನ ಕಾರ್ಯಕ್ರಮದಲ್ಲಿ ರವಿಶಂಕರ್ ಕಾಣಿಸಿಕೊಂಡಿದ್ದರು.
ಈ ವೇಳೆ ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ ಆರ್ಮುಗಂ ಕಿಚ್ಚ ಸುದೀಪ್ ಅವರನ್ನು ನೆನಪಿಸಿಕೊಂಡರು. ಕಿಚ್ಚ ಕರೆ ಮಾಡಿದಾಗ ಮೊದಲು ನಾನು ಅಣ್ಣ ಸಾಯಿ ಕುಮಾರ್ ಅವರಿಗೆ ಕಾಲ್ ಮಾಡೋಕೆ ಹೋಗಿ ನನಗೆ ಮಾಡಿದ್ದಾರೆ ಎಂದುಕೊಂಡಿದ್ದೆ. ಆ ಬಳಿಕ ತಮ್ಮ ಕೆಂಪೇಗೌಡ ಸಿನಿಮಾದಲ್ಲಿ ನಟಿಸಬೇಕೆಂದು ಕೇಳಿಕೊಂಡರು. ನಾನು ಕೂಡ ಓಕೆ ಅಂದೆ. ನನ್ನ ಮನದಲ್ಲಿದ್ದದು ಮೋಸ್ಟ್ಲಿ ಪ್ರಕಾಶ್ ರಾಜ್ ಅವರೊಂದಿಗೆ ಕಾಣಿಸಿಕೊಳ್ಳುವ ಸೈಡ್ ಪಾತ್ರ. ನಂತರ ನನ್ನ ಪಾತ್ರವೇ ಪ್ರಕಾಶ್ ರಾಜ್ ಮಾಡಿರುವ ರೋಲ್ ಎಂದಾಗ ಭಯವಾಗಿತ್ತು. ಆದರೂ ನಾನು ಒಪ್ಪಿಕೊಂಡೆ ಎಂದರು ರವಿಶಂಕರ್.
ಅಂದು ಸುದೀಪ್ ಕೊಟ್ಟ ಪ್ರೋತ್ಸಾಹವೇ ಅಂತಹದೊಂದು ಅಭಿನಯ ನನ್ನಿಂದ ಬರಲು ಕಾರಣ. ನಂತರ ಎಲ್ಲರೂ ನನ್ನನ್ನು ಆರ್ಮುಗಂ ಎಂದೇ ಕರೆಯಲಾರಂಭಿಸಿದರು ಎಂದು ನೆನಪಿನಂಗಳಕ್ಕೆ ಜಾರಿದರು. ಇದೇ ವೇಳೆ ಕೆಂಪೇಗೌಡ ಚಿತ್ರದ ಖಡಕ್ ಡೈಲಾಗ್ಗಳನ್ನು ಉದುರಿಸಿದರು. ಅಷ್ಟೇ ಅಲ್ಲದೆ ತಮ್ಮ ಮಾತೃಭೂಮಿಯಲ್ಲಿಯೂ ಕನ್ನಡಕ್ಕೆ ಪರಾಕ್ ಹೇಳುವುದನ್ನು ಮಾತ್ರ ಮರೆತಿರಲಿಲ್ಲ. ಅದೇ ವೇದಿಕೆಯಲ್ಲಿ ಜೈ ಕನ್ನಡ, ಜೈ ಭುವನೇಶ್ವರಿ ಎಂದು ಘೋಷಣೆಯನ್ನೂ ಕೂಗಿ ತಮ್ಮ ಕನ್ನಡ ಪ್ರೇಮವನ್ನು ಮತ್ತೊಮ್ಮೆ ತೆರೆದಿಟ್ಟರು.
