Film News

ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ್!

ಸ್ಯಾಂಡಲ್‌ವುಡ್‌ನಲ್ಲಿ ಬಯೋಪಿಕ್‌ಗಳ ಸಂಖ್ಯೆ ಕಡಿಮೆ ಇದ್ದರೂ, ಆಗೊಂದು ಈಗೊಂದು ಅಂತಹ ಸಿನಿಮಾಗಳು ಸೆಟ್ಟೇರುತ್ತವೆ. ಭೂಗತ ಲೋಕದ ಮಾಜಿ ಡಾನ್‌ ಮುತ್ತಪ್ಪ ರೈ ಜೀವನವನ್ನು ಆಧರಿಸಿ ‘ರೈ’ ಸಿನಿಮಾ ಘೋಷಣೆ ಆಗಿತ್ತು. ಆದರೆ, ಅದ್ಯಾಕೋ ಮುಂದುವರಿಯಲೇ ಇಲ್ಲ. ‘ಆ ದಿನಗಳು’ ಚಿತ್ರದಲ್ಲೂ ಬೆಂಗಳೂರಿನ 90ರ ದಶಕದ ಭೂಗತ ಲೋಕದ ಪರಿಚಯ ಮಾಡಿಕೊಡಲಾಗಿತ್ತು. ಇದೆಲ್ಲದರ ಮಧ್ಯೆ ಕೆಲ ವರ್ಷಗಳಿಂದ ಮಾಜಿ ಭೂಗತ ದೊರೆ ಎಂ.ಪಿ. ಜಯರಾಜ್‌ ಬಯೋಪಿಕ್‌ ಮಾಡಲಾಗುತ್ತಿದೆ ಎಂಬ ಬಗ್ಗೆ ಸುದ್ದಿ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಕೇಳಿಬರುತ್ತಿತ್ತು. ಆದರೆ, ಸಿನಿಮಾ ಸೆಟ್ಟೇರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ. ಇದೀಗ ಆ ಕುರಿತು ದೊಡ್ಡ ಬೆಳವಣಿಗೆಯೇ ನಡೆದಿದೆ. ಎಂ.ಪಿ. ಜಯರಾಜ್ ಬಯೋಪಿಕ್ ಆಗುವುದು ಖಚಿತವಾಗಿದೆ.

ಭೂಗತ ಲೋಕದ ಕಥೆಗಳನ್ನು ತೆರೆಗೆ ತರುವಲ್ಲಿ ಅಗ್ನಿ ಶ್ರೀಧರ್ ಸಿದ್ಧಹಸ್ತರು. ‘ಸ್ಲಂ ಬಾಲಾ’, ‘ಆ ದಿನಗಳು’, ‘ಎದೆಗಾರಿಕೆ’ ಮುಂತಾದ ಸಿನಿಮಾಗಳಿಗೆ ಅವರದ್ದೇ ಸ್ಕ್ರಿಪ್ಟ್. ‘ಕಿರಗೂರಿನ ಗಯ್ಯಾಳಿಗಳು’ ಚಿತ್ರದ ನಂತರ ಮತ್ತೊಂದು ಸಿನಿಮಾ ಶುರು ಮಾಡಿರಲಿಲ್ಲ. ಈಗ ಜಯರಾಜ್ ಬಯೋಪಿಕ್‌ಗೆ ಕೈ ಹಾಕಿದ್ದಾರೆ. ಇದರ ಸ್ಕ್ರಿಪ್ಟ್ ಪೂರ್ತಿ ಅವರದ್ದೇ. ಶೂನ್ಯ ಎಂಬ ಹೊಸ ಪ್ರತಿಭೆ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.

Trending

To Top