Film News

ಕೊಲೆಯಲ್ಲಿ ಕೊನೆಯಾಯ್ತು ಫ್ಯಾನ್ಸ್ ವಾರ್ !

ಪ್ರತಿ ರಾಜ್ಯವೂ ಸಂಗ್ರಹಿಸುತ್ತಿರುವ ರಿಲೀಫ್‌ ಫಂಡ್‌ಗೆ ಆಯಾ ಭಾಷೆಯ ಸಿನಿ ತಾರೆಯರು ದೇಣಿಗೆ ನೀಡುತ್ತಿದ್ದಾರೆ. ಈ ಬಗ್ಗೆಯೇ ಸಿನಿಮಾ ನಟರಿಬ್ಬರ ಅಭಿಮಾನಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಾರ್‌ ನಡೆಯುವುದು ಸಾಮಾನ್ಯ. ಆದರೆ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ನಟರ ಅಭಿಮಾನಗಳು ಜಗಳವಾಡಿ, ಪ್ರಾಣ ಕಳೆದುಕೊಳ್ಳವ ಪರಿಸ್ಥತಿ ಎದುರಾಗಿದೆ.

ಕೊರೋನಾ ವಿರುದ್ಧ ಹೋರಾಡಲು ತಮಿಳು ಚಿತ್ರರಂಗದ ಸ್ಟಾರ್ ನಟರಾದ ರಜನಿಕಾಂತ್‌ ಮತ್ತು ವಿಜಯ್ ದಳಪತಿ ದೇಣಿಗೆ ನೀಡಿದ್ದಾರೆ. ಆದರೀಗ ಇಂಥ ಒಳ್ಳೇ ಕೆಲಸವೇ ಅಭಿಮಾನಿ ಸಾವಿಗೆ ಕಾರಣವಾಗಿದೆ.

ಯಾವ ನಟ ಎಷ್ಟು ದೇಣಿಗೆ ನೀಡಿದ್ದಾನೆ ಎಂದು ವಿಜಯ್ ದಳಪತಿ ಹಾಗೂ ರಜನಿಕಾಂತ್ ಅಭಿಮಾನಿಗಳ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿದೆ. ಕೈ ಕೈ ಮಿಸಲಾಯಿಸಿಕೊಳ್ಳುವ ಸ್ಥಿತಿ ತಲುಪಿದೆ. ಈ ಕಿತ್ತಾಟದಲ್ಲಿ ನಟ ವಿಜಯ್ ಅಭಿಮಾನಿ ಅಸುನೀಗಿದ್ದಾನೆ.

ರಜನೀಕಾಂತ್ ಅಭಿಮಾನಿ ದಿನೇಶ್‌ ಬಾಬು ಮತ್ತು ವಿಜಯ್ ಫ್ಯಾನ್ ಯುವರಾಜ್‌ ನೆರೆಹೊರೆಯವರಾಗಿದ್ದು, ‘ನಿಮ್ಮ ಹೀರೋ ಕಡಿಮೆ ದೇಣಿಗೆ ನೀಡಿದ್ದಾರೆ,’ ಎಂದು ವಿಜಯ್ ಅಭಿಮಾನಿ ಯುವರಾಜ್‌ ನೀಡಿದ ಹೇಳಿಕೆ ವಾದಕ್ಕೆ ಎಡೆ ಮಾಡಿಕೊಟ್ಟಿದೆ. ಲಾಕ್‌ಡೌನ್‌ ಇದ್ದರೂ ಎಲ್ಲಿಂದಲೋ ತಂದು, ಇಬ್ಬರೂ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ದಿನೇಶ್‌ ಬಾಬು, ಯುವರಾಜ್‌ನನ್ನು ಬಲವಾಗಿ ತಳ್ಳಿದ ಕಾರಣಕ್ಕೆ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. 22 ವರ್ಷದ ಯುವರಾಜ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಲಾಕ್‌ಡೌನ್‌ ಉಲ್ಲಂಘನೆ ಹಾಗೂ ಕೊಲೆ ಆರೋಪದ ಮೇಲೆ ಪೊಲೀಸರು ದಿನೇಶ್‌ ಬಾಬುನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಭಿಮಾನಿಗಳ ಸಾವಿನ ವಿಚಾರ ತಿಳಿಯುತ್ತಿದ್ದಂತೆ, ಕಾಲಿವುಡ್ ಚಿತ್ರರಂಗ ಬೆಚ್ಚಿ ಬಿದ್ದಿದೆ.

ವಿಜಯ್ ದಳಪತಿ 1.3 ಕೋಟಿಯನ್ನು PM-cares ಹಾಗೂ ಸಿಎಂ ರಿಲೀಫ್‌ ಫಂಡ್‌ಗೆ ನೀಡಿದ್ದಾರೆ. ಇನ್ನೊಂದೆಡೆ ರಜನಿಕಾಂತ್ 50 ಲಕ್ಷ ರೂ. ಸಿಎಂ ಫಂಡ್‌ಗೆ ದೇಣಿಗೆ ನೀಡಿದ್ದು, ನಿರ್ಗತಿಕರಿಗೆ ಹಾಗೂ ಅಗತ್ಯ ಇರುವವರಿಗೆ ಫುಡ್‌ ಕಿಟ್‌ ವಿತರಿಸಿದ್ದಾರೆ.

Trending

To Top